ಕಾರವಾರ: ಇಲ್ಲಿನ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ದ್ರೋಹ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.
ಇತ್ತೀಚೆಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಈ ವಿಷಯ ಕನ್ನಡಿಗರಿಗೆ ಗೊತ್ತಾಗದಂತೆ ಅರ್ಜಿ ಕರೆಯಲಾಗಿತ್ತು ಎನ್ನಲಾಗಿದೆ.
ಕನ್ನಡಿಗರಿಗೆ ವಿಷಯ ತಿಳಿಸಿದೆ ಕೇರಳ, ತಮಿಳುನಾಡು, ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯದ ಪತ್ರಿಕೆಗಳಲ್ಲಿ ಮಾತ್ರ ಪ್ರಕಟಣೆ ಹೊರಡಿಸಲಾಗಿದೆ. ಕನ್ನಡದ ಯಾವ ಮಾಧ್ಯಮದಲ್ಲೂ ಈ ವಿಷಯ ತಿಳಿಯದಂತೆ ನೋಡಿಕೊಂಡಿದ್ದಾರೆ. ಇದು ಕನ್ನಡ ನೆಲದಲ್ಲೇ ಕನ್ನಡಿಗರಿಗೆ ಆದ ದ್ರೋಹವಾಗಿದೆ.
ಕೈಗಾ ಅಣುಸ್ಥಾವರದಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಯಿಂದ ಹಿಡಿದು ಟೆಕ್ನೀಷಿಯನ್ ವರೆಗೆ ಒಟ್ಟು 108 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇಂಗ್ಲಿಷ್, ಹಿಂದಿ, ಮಲೆಯಾಳಿ, ತಮಿಳು ಭಾಷೆಯ ಪತ್ರಿಕೆಗಳಿಗೆ ಪ್ರಕಟಣೆ ನೀಡಿದೆ.
ಸ್ಥಳೀಯ ಕನ್ನಡ ಪತ್ರಿಕೆಯಲ್ಲಿ ಪ್ರಕಟಣೆ ನೀಡದೇ ಸ್ಥಳೀಯರಿಗೆ ಉದ್ಯೋಗದ ಬಗ್ಗೆ ಮಾಹಿತಿ ದೊರೆಯದಂತೆ ಕೈಗಾ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ನೆಲದಲ್ಲಿದ್ದು, ಕನ್ನಡಿಗರಿಗೇ ಅನ್ಯಾಯ ಮಾಡಿದ್ದಾರೆಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಹುದ್ದೆಗಳಿಗೆ ನೋಟಿಫಿಕೇಶನ್ ಹೊರಡಿಸಿ, ಕನ್ನಡಿಗರಿಗೆ ಆದ್ಯತೆ ಸಿಗುವಂತೆ ಮಾಡಬೇಕು ಎಂದು ಕನ್ನಡ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.