ಶಿವಮೊಗ್ಗ: ಜಿಲ್ಲೆಯ ಜನರು ಬೆಚ್ಚಿ ಬೀಳುವಂತಹ ವಿಡಿಯೋವೊಂದು ವೈರಲ್ ಆಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಓಡಾಡಿದ ವಿಡಿಯೋಗಳು ವೈರಲ್ ಆಗಿವೆ.
ಕೈಯಲ್ಲಿ ಮಚ್ಚು, ಲಾಂಗ್, ಚಾಕು ಹಿಡಿದು 6 ಜನ ದರೋಡೆಕೋರರ ಗ್ಯಾಂಗ್ ಓಡಾಟ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಡ್ಡಿನಕೊಪ್ಪದ ಸಮೀಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದ ಪುಟ್ಟಪ್ಪ ಕ್ಯಾಂಪ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.
ದರೋಡೆಕೋರರು ಜೀನ್ಸ್ ಪ್ಯಾಂಟ್, ಬನಿಯನ್ ಮಾತ್ರ ಧರಿಸಿದ್ದಾರೆ. ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಾರೆ. ಗುರುತು ಮರೆ ಮಾಡುವುದಕ್ಕಾಗಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಕೈಯಲ್ಲಿ ಟಾರ್ಚ್ ಇದೆ. ಗ್ಲೌಸ್ ಕೂಡ ಧರಿಸಿದ್ದಾರೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಬಡಾವಣೆಯ ಜನರು ಬೆಳಗ್ಗೆ ಎದ್ದು ಸಿಸಿ ಕ್ಯಾಮೆರಾ ಗಮನಿಸಿದಾಗ ಈ ದರೋಡೆಕೋರರ ಗ್ಯಾಂಗ್ ಓಡಾಡಿದ್ದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕಾರಿಯಪ್ಪ ಹಾಗೂ ತುಂಗಾ ನಗರ ಪಿಐ ಗುರುರಾಜ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.