ಉತ್ತರಕನ್ನಡ | ಚಿನ್ನ, ಬೆಳ್ಳಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಬಡವರು ಹಾಗೂ ಮಧ್ಯಮ ವರ್ಗದ ಜನ ಶುಭ ಕಾರ್ಯಕ್ಕೆಇದೀಗ ಚಿನ್ನ ಖರೀದಿಸುವುದೇ ಸಾಹಸವಾಗಿದೆ.
ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಯುವಕನೋರ್ವ ಮದುವೆ ನಿಶ್ಚಯವಾಗಿ ಹುಬ್ಬಳ್ಳಿಯಲ್ಲಿ ಬಟ್ಟೆ ಖರೀದಿಸಿ, ಭಟ್ಕಳದಲ್ಲಿ ಚಿನ್ನ ಖರೀದಿಸಲು ಹೋಗಿ ಹೆಚ್ಚಿನ ಹಣ ನೀಡಲಾಗದೇ ಕುಟುಂಬದ ಮುಂದೆ ಮರ್ಯಾದೆ ಹೋಗುವುದಕ್ಕೆ ಅಂಜಿ ಮೂರು ತಿಂಗಳಿಂದ ನಾಪತ್ತೆಯಾಗಿದ್ದು, ಕೊನೆಗೂ ಭಟ್ಕಳ ಪೊಲೀಸರು ಆತನನ್ನ ಪತ್ತೆಹಚ್ಚಿ ಬುದ್ದಿವಾದ ಹೇಳಿ ಕುಟುಂಬಕ್ಕೆ ಸೇರಿಸಿದ್ದಾರೆ. ಹೌದು ಈ ಘಟನೆ ಕುಮಟಾದಲ್ಲಿ ನಡೆದಿದ್ದು, ಜಾಕೀರ ಬೇಗ್ (33) ಎಂಬಾತನೇ ನಾಪತ್ತೆಯಾಗಿದ್ದ ಮದುಮಗ.

ಕುಮಟಾದ ಜಾಕೀರ ಬೇಗ್ ದುಬೈನಲ್ಲಿ ಕೆಲಸ ಮಾಡುತಿದ್ದ. ಕುಟುಂಬ ಸಹ ಈತ ದುಬೈನಲ್ಲಿ ಚೆನ್ನಾಗಿ ಸಂಪಾದನೆ ಮಾಡಿದ್ದಾನೆ, ಒಳ್ಳೆ ಹುಡಗಿ ನೋಡಿ ವಿವಾಹ ಮಾಡಿಸಿ ಬಿಡೋಣ ಎಂದು ಶಿರಸಿಯ ಯುವತಿಯೊಂದಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಚಿನ್ನ ಖರೀದಿ ವೇಳೆ ಮದುಮಗ ನಾಪತ್ತೆಯಾಗಿದ್ದ.
ನಂತರ ತನಿಖೆ ಕೈಗೊಂಡ ಪಿ.ಎಸ್.ಐ ನವೀನ್ ನಾಯ್ಕ್ ನೇತೃತ್ವದ ತಂಡ ಮೊದಲು ಆತ ಮೊಬೈಲ್ ಮಾರಿ ಹಣ ಪಡೆದು ತೆರಳಿರುವುದನ್ನು ಪತ್ತೆ ಮಾಡಿದರು. ನಂತರ ಅದರ ಜಾಡು ಹಿಡಿದು ತಾಂತ್ರಿಕ ಸಹಾಯದಿಂದ ಆತ ತುಮಕೂರಿನಲ್ಲಿ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವುದನ್ನ ಪತ್ತೆಮಾಡಿದ್ದಾರೆ. ಕೊನೆಗೂ ಮೂರು ತಿಂಗಳ ನಂತರ ಆತನನ್ನು ಭಟ್ಕಳಕ್ಕೆ ಕರೆತಂದು ಕುಟುಂಬದ ಮಡಿಲು ಸೇರಿಸಿದ್ದಾರೆ.
ಇದನ್ನೂ ಓದಿ : ಮಂಡ್ಯ | ಪಕ್ಕದ ಮನೆಯವರ ಕಿರುಕುಳಕ್ಕೆ ತಾಯಿ-ಮಗಳು ಆತ್ಮಹತ್ಯೆ



















