ಬೆಂಗಳೂರು: ರಾಜ್ಯಪಾಲರು ಪ್ರತಿ ದಿನ ಒಂದಿಲ್ಲೊಂದು ಮಾಹಿತಿ ಕೇಳುತ್ತಿದ್ದಾರೆ. ಆದರೆ, ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ನೀಡುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿದ್ದ ಜಮೀನು ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳುತ್ತಿದ್ದಾರೆ. ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆ ಹ್ನೇಹದ ವಾತಾವರಣ ಇರಬೇಕು. ಆದರೆ, ರಾಜ್ಯಪಾಲರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಪ್ರತಿನಿತ್ಯ ಸರ್ಕಾರದ ಕಾರ್ಯದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಈ ರೀತಿ ಕೇಳಿದ ಯಾವ ಸಂದರ್ಭದ ಊದಾಹರಣೆಯೂ ಇರಲಿಲ್ಲ. ಇದನ್ನು ಹೀಗೆ ಮುಂದುವರೆಯಲು ಬಿಡುವುದಿಲ್ಲ. ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅವಶ್ಯವಿರುವ ಉತ್ತರವನ್ನು ಮಾತ್ರ ಕೊಡುತ್ತೇವೆ. ಸಂಪುಟದಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ಹಲವರು ರಾಜ್ಯಪಾಲರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಹುದ್ದೆ ಅತ್ಯಂತ ಜವಾಬ್ದಾರಿಯುತ ಹುದ್ದೆ. ಅದಕ್ಕೆ ತಕ್ಕಂತೆ ರಾಜ್ಯಪಾಲರು ನಡೆದುಕೊಳ್ಳಬೇಕು. ಅದರ ಪಾವಿತ್ರ್ಯತೆಯನ್ನು ದ್ವೇಷ ಮಾಡವುದಕ್ಕಾಗಿ ಹಾಳು ಮಾಡಿಕೊಳ್ಳಬಾರದು ಎಂದು ಹೇಳಇದ್ದಾರೆ.
ಪ್ರತಿ ದಿನ ಪತ್ರ ಬರೆದು ಮಾಹಿತಿ ಕೇಳೋದು ಸಂವಿಧಾನ ವಿರೋಧವಾಗಿದೆ. ಸಿದ್ದರಾಮಯ್ಯಗೆ ಒಂದು ಮಾನದಂಡ, ಕುಮಾರಸ್ವಾಮಿಗೆ ಒಂದು ಮಾನದಂಡ ಆಗಲ್ಲ. ಹಿಂದಿನ ಸಿಎಂಗಳ ಪ್ರಕರಣಗಳಿಗೆ ರಾಜ್ಯಪಾಲರು ನೋಟಿಸ್ ನೀಡಿಯೇ ಇಲ್ಲ. ಕೇವಲ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.