ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಕಾನೂನು ಸಂಘರ್ಷ ಜೋರಾಗಿದ್ದು, ಈಗ ರಾಜ್ಯಪಾಲರು ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗುವಂತೆ ಮಾಡಿದ್ದಾರೆ.
ವಿಧಾನಮಂಡಲ ಉಭಯ ಸದನ ಅನುಮೋದಿಸಿದ್ದ 11 ವಿಧೇಯಕಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕದೆ ಮರಳಿ ಕಳುಹಿಸಿದ್ದಾರೆ. ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ನಂತರ ರಾಜಭವನ ಮತ್ತು ಸರ್ಕಾರದ ನಡುವಿನ ಗುದ್ದಾಟ ಜೋರಾಗಿದೆ.
ಈಗ ರಾಜ್ಯಪಾಲರು, ಪಿಎಸ್ ಐ ನೇಮಕ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ರೂಪಿಸಲಾಗಿದ್ದ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು (ನೇಮಕದಲ್ಲಿ ಭ್ರಷ್ಟಾಚಾರ ಮತ್ತಿತರ ಅಕ್ರಮ ತಡೆ) ವಿಧೇಯಕ -2023’ ನ್ನು ಗೃಹ ಇಲಾಖೆಯ ಸ್ಪಷ್ಟನೆ ನಡುವೆಯೂ ರಾಜ್ಯಪಾಲರು 2ನೇ ಬಾರಿಗೆ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಗರ ಯೋಜನೆ ಕಾನೂನು ತಿದ್ದುಪಡಿ ಸೇರಿ ಒಟ್ಟು 11 ವಿಧೇಯಕಗಳನ್ನು ಪುನರ್ ಪರಿಶೀಲಿಸಲು ರಾಜ್ಯಪಾಲರು ಸೂಚಿಸಿದ್ದಾರೆ.
ಹೀಗಾಗಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ನಾಯಕರ ಸಲಹೆಯಂತೆ ರಾಜ್ಯಪಾಲರು ವಿಧೇಯಕಗಳಿಗೆ ಅನುಮೋದನೆ ನೀಡದೆ ಹಿಂದಿರುಗಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಡಾಮಂಡಲವಾಗಿದ್ದಾರೆ.
ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳು (ನೇಮಕಾತಿಯಲ್ಲಿಭ್ರಷ್ಟಾಚಾರ ಮತ್ತಿತರ ಅಕ್ರಮ ತಡೆ) ವಿಧೇಯಕ -2023, ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಸಂಸ್ಥೆಗಳು ವಿಧೇಯಕ -2024, ಕರ್ನಾಟಕ ನಗರ ಯೋಜನೆ (ತಿದ್ದುಪಡಿ) ವಿಧೇಯಕ -2024, ಗದಗ -ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ -2023, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ -2024, ಕರ್ನಾಟಕ ಪೌರಸಂಸ್ಥೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ -2024, ಕರ್ನಾಟಕ ಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ (ಕಲ್ಯಾಣ) ವಿಧೇಯಕ -2024, ಕರ್ನಾಟಕ ಸಹಕಾರ ಸೊಸೈಟಿಗಳು (ತಿದ್ದುಪಡಿ) ವಿಧೇಯಕ -2024, ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ -2024, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ -2024, ಕರ್ನಾಟಕ ವಿಧಾನಮಂಡಲ (ಅನರ್ಹ ತಡೆ) ತಿದ್ದುಪಡಿ ವಿಧೇಯಕ -2024ಗಳಿಗೆ ಸಹಿ ಹಾಕದೆ, ಮರಳಿ ಪರಿಶೀಲಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.