ಬೆಂಗಳೂರು: ರಾಜ್ಯಪಾಲರು ಆರ್ ಟಿಐ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನಡೆ ನೋಡಿದರೆ ಅವರೇ ವಿರೋಧ ಪಕ್ಷದ ನಾಯಕರ ರೀತಿ ವರ್ತಿಸುತ್ತಿದ್ದಾರೆ. ಆರ್ ಟಿಐ ಕಾರ್ಯಕರ್ತರಂತೆ ರಾಜ್ಯಪಾಲರು ಅರ್ಜಿ ಹಾಕಿ ಮಾಹಿತಿ ಕೇಳುತ್ತಿದ್ದಾರೆ. ತಮಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಕೇಳುತ್ತಿದ್ದಾರೆ. ಈ ರೀತಿಯ ರಾಜ್ಯಪಾಲರನ್ನು ನಾನು ಎಲ್ಲಿಯೂ ನೋಡಿಲ್ಲ. ಈ ವರ್ತನೆ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಪ್ರಕರಣಗಳನ್ನು ಕೈ ಬಿಟ್ಟು, ಕಾಂಗ್ರೆಸ್ ನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಏನೋ ನಡೆಯುತ್ತಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡಲು ಆರಂಭಿಸಿದೆ. ರಾಜ್ಯಪಾಲರು ಈ ರೀತಿ ಮಾಹಿತಿ ಕೇಳುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸರ್ಕಾರದ ನೂರು ಕೋಟಿ ಆಸ್ತಿ ಲೂಟಿ ಮಾಡಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಲೂಟಿಯಲ್ಲಿ ಭಾಗಿದಾರರು. ತನಿಖೆಯಲ್ಲಿ ಈ ಸತ್ಯಾಂಶ ಹೊರಗೆ ಬರಲಿ ಎನ್ನುವುದು ನಮ್ಮ ಉದ್ದೇಶ. ಲೋಕಾಯುಕ್ತರು ಯಡಿಯೂರಪ್ಪ ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಬಹುಶಃ ಕುಮಾರಸ್ವಾಮಿ ಅವರನ್ನೂ ಕರೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.