ಬೆಂಗಳೂರು: ರಾಜ್ಯ ಸರ್ಕಾರದ ಓಟಕ್ಕೆ ರಾಜ್ಯಪಾಲರು ಮತ್ತೆ ಬ್ರೇಕ್ ಹಾಕಿದ್ದಾರೆ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರಿಗೆ ಕೊಕ್ ನೀಡಿ, ಸಿಎಂಗೆ ಅಧಿಕಾರ ವರ್ಗಾಯಿಸುವ ಕಾನೂನು ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್(Thawarchand Gehlot) ಒಪ್ಪಿಗೆ ನೀಡಿಲ್ಲ.
ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಸರಕಾರ ” ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ(Karnataka State Rural Development) ಮತ್ತು ಪಂಚಾಯಿತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ -2024″ (Panchayat Raj University (Amendment) Bill-2024) ನ್ನು ಬೆಳಗಾವಿ ಅಧಿವೇಶನದಲ್ಲಿ ಪಾಸ್ ಮಾಡಿತ್ತು. ಅಲ್ಲದೇ, ಒಟ್ಟು 9 ವಿಧೇಯಕಗಳಿಗೆ ರಾಜಭವನ ನುಮೋದನೆ ನೀಡಿಲ್ಲ. ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ -2024’, (‘Mysore Urban Development Authority Bill-2024’) ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಹಾಗೂ ಚಾಣಕ್ಯ ವಿವಿ ಆಡಳಿತ ಮಂಡಳಿಗೆ ಸರಕಾರದ ಪ್ರತಿನಿಧಿ ನೇಮಕ ಮಾಡುವ ಸಂಬಂಧ ಕಾನೂನು ತಿದ್ದುಪಡಿ ವಿಧೇಯಕಕ್ಕೂ ರಾಜ್ಯಪಾಲರು ಅಂಕಿತ ಹಾಕಿಲ್ಲ.
ಐದು ವಿಧೇಯಕ ವಾಪಸ್
ಖನಿಜ ಹೊಂದಿರುವ ಆಸ್ತಿ ಮಾಲೀಕರಿಗೂ ತೆರಿಗೆ ವಿಧಿಸುವ ಉದ್ದೇಶದ ‘ ಕರ್ನಾಟಕ ಖನಿಜ ಹಕ್ಕುಗಳ ತೆರಿಗೆ ವಿಧೇಯಕ -2024 ‘ (Karnataka Mineral Rights Tax Bill-2024’) ಅನ್ನು ಮರು ಪರಿಶೀಲನೆ ಮಾಡುವಂತೆ ಸೂಚಿಸಿ ಮರಳಿ ಕಳುಹಿಸಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ವಿಧಾನಮಂಡಲದ ಒಪ್ಪಿಗೆ ಪಡೆಯಲಾಗಿದ್ದ ನಾಲ್ಕು ವಿಧೇಯಕಗಳನ್ನೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ 2ನೇ ಬಾರಿಗೆ ಮರಳಿ ಕಳುಹಿಸಿದ್ದಾರೆ.
ಸಹಕಾರ ಸೊಸೈಟಿಗಳ ತಿದ್ದುಪಡಿ ಕಾಯಿದೆ, ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯಿದೆ, ಗದಗ -ಬೆಟಗೇರಿ ವಾಣಿಜ್ಯ, ಸಾಂಸ್ಕೃತಿಕ ಮತ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಗಳನ್ನು ಮರಳಿ ಕಳುಹಿಸಿದ್ದಾರೆ.
11 ಬಿಲ್‌ಗಳಿಗೆ ಒಪ್ಪಿಗೆ
ಸಿಎಂ ಸಲಹೆಗಾರರು, ರಾಜಕೀಯ ಕಾರ್ಯದರ್ಶಿಗಳು ಮತ್ತು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಶಾಸಕರಿಗೆ ಅನರ್ಹತೆಯಿಂದ ವಿನಾಯಿತಿ ನೀಡುವ ವಿಧೇಯಕ ಸೇರಿ ಕಳೆದ ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆಗೊಂಡಿದ್ದ 11 ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ.