ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ. ಆರ್ಥಿಕ ಶಿಸ್ತಿ ಉತ್ತಮವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಸರ್ಕಾರದ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ರಾಜ್ಯಪಾಲರು ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಹೊಗಳಿದರು.
ಭಾಷಣದಲ್ಲಿ ಸರ್ಕಾರದ ಆರ್ಥಿಕ ಶಿಸ್ತು, ಕಾನೂನು ಸುವ್ಯವಸ್ಥೆ ಸದೃಢವಾಗಿದೆ ಎಂದು ರಾಜ್ಯಪಾಲರಿಂದ ಹೊಗಳಿಕೆ ಪಡೆದುಕೊಳ್ಳುವ ಮೂಲಕ ವಿಪಕ್ಷಗಳಿಗೆ ಸರ್ಕಾರ ತಿರುಗೇಟು ಕೊಟ್ಟಿದೆ. ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ, ತನ್ನ ಎರಡು ವರ್ಷದ ಸಾಧನೆಗಳಿಗೆ ಬೆನ್ನು ತಟ್ಟಿಸಿಕೊಂಡಿದೆ. ಸರ್ಕಾರದ ಯೋಜನೆಗಳು, ನೀತಿ ನಿರೂಪಣೆ, ಕಳೆದ ಎರಡು ವರ್ಷಗಳ ಸರ್ಕಾರದ ಹಾದಿ ಬಗ್ಗೆ ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿ, ಸರ್ಕಾರ ಅಭಿವೃದ್ಧಿ ವೇಗವಾಗಿ ಸದೃಢಗೊಳಿಸಿದೆ. ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ, ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ಎಂದಿದ್ದಾರೆ.
39 ಪುಟಗಳ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ರಾಜ್ಯಪಾಲರು ಓದಿದರು. ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಅಪರಾಧ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ಹೇಳುವ ಮೂಲಕ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಠಕ್ಕರ್ ಕೊಟ್ಟಿದ್ದಾರೆ.
ಜಿಎಸ್‌ಟಿ ತೆರಿಗೆ ಸಂಗ್ರಹ, ರಾಜಸ್ವಸ್ವೀಕೃತಿ, ಕೃಷಿ, ನೀರಾವರಿ, ಪಶು ಸಂಗೋಪನೆ, ಗ್ಯಾರಂಟಿ ಯೋಜನೆಗಳು, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಕಳೆದೆರಡು ವರ್ಷಗಳ ಕಾರ್ಯಕ್ರಮ, ಕಾಮಗಾರಿ, ಅನುದಾನ ಬಗ್ಗೆ ಪ್ರಸ್ತಾಪಿಸಿ, ಶ್ಲಾಘಿಸಿದರು. ಬೆಂಗಳೂರು ಟ್ರಾಫಿಕ್ ದಟ್ಟಣೆ ನಿಯಂತ್ರಣ ಬಗ್ಗೆ ಪ್ರಸ್ತಾಪಿಸಿದ್ದು, ಗಮನ ಸೆಳೆಯಿತು. ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ, ರಸ್ತೆ ಮೇಲ್ಸೇತುವೆ ಕುರಿತು ಹೇಳಿದರು.