ಬೆಂಗಳೂರು | ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಹೊಟಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು.. ಭದ್ರತೆಯ ನೆಪವೊಡ್ಡಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ವಾರ್ತಾ ಇಲಾಖೆಗೆ ಪತ್ರ ಬರೆದಿದೆ.
ಈ ಪತ್ರದ ಪ್ರಕಾರ, ಮಾಧ್ಯಮಗಳು ರಾಜಕೀಯ ನಾಯಕರ ಪ್ರತಿಕ್ರಿಯೆಗಳನ್ನು (ಬೈಟ್) ಪೋರ್ಟಿಕೋ ಅಥವಾ ಕೆಂಗಲ್ ಗೇಟ್ ಬಳಿಯ ನಿಗದಿತ ಸ್ಥಳದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರನ್ನು ವಿಧಾನಸೌಧದ ಇತರ ಯಾವುದೇ ಸ್ಥಳದಲ್ಲಿ ಹಿಂಬಾಲಿಸಿ ಪ್ರತಿಕ್ರಿಯೆ ಪಡೆಯುವುದನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ.

ಭದ್ರತೆಯ ನೆಪದಲ್ಲಿ DPAR ಹೊರಡಿಸಿದ ಹೊಸ ಆದೇಶ ವಿವಾದಕ್ಕೆ ಕಾರಣವಾಗಿದ್ದು, ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಈ ಸವಾರಿ ಮಾಡುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ ಎಂಬ ಚರ್ಚೆ ಶುರುವಾಗಿದೆ.
ಕಳೆದ ವಾರವಷ್ಟೇ ಇದೇ ಡಿಪಿಎಆರ್ ಇಲಾಖೆಯ ಸಿಬ್ಬಂದಿಯಿಂದ 300 ಗ್ರಾಂ ಚಿನ್ನದ ಕಳ್ಳತನ ನಡೆದಿರುವುದು ಜಗಜ್ಜಾಹೀರಾಗಿತ್ತು. ಅಲ್ಲದೆ, ಇತ್ತೀಚೆಗೆ ಸಿಎಂ ಸಹಿ ಮಾಡಿದ್ದ ಶಿಫಾರಸ್ಸು ಪತ್ರ ವೈರಲ್ ಆಗಿದ್ದು, ಮತ್ತು ಸ್ವಯಂ ನಿವೃತ್ತಿ ಪಡೆದ ಸ್ವಾಮೀಜಿಯೊಬ್ಬರಿಗೆ ಬಡ್ತಿ ನೀಡಿದ ವಿವಾದಗಳು ಸರ್ಕಾರಕ್ಕೆ ಮುಜುಗರ ತಂದಿದ್ದವು. ಈ ಎಲ್ಲಾ ಆಡಳಿತಾತ್ಮಕ ವೈಫಲ್ಯಗಳು ಮಾಧ್ಯಮಗಳಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ನೋಟೀಸ್‌ನಲ್ಲಿ ಏನಿದೆ?
DPAR ಇಲಾಖೆಯ ಕಾರ್ಯದರ್ಶಿಗಳು ನೀಡಿರುವ ಸೂಚನೆಯ ಪ್ರಕಾರ, ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಅಥವಾ ಸಚಿವರುಗಳು ವಿಧಾನಸೌಧ ಪ್ರವೇಶಿಸುವಾಗ ಅವರ ಹಿಂದೆ ಹೋಗಬಾರದು. ವಾರ್ತಾ ಇಲಾಖೆಯಿಂದ ಗುರುತಿನ ಚೀಟಿ ಪಡೆದ ಪತ್ರಕರ್ತರು ಕೇವಲ ನಿಗದಿಪಡಿಸಿದ ಜಾಗದಲ್ಲೇ ಇರಬೇಕು. ಒಂದು ವೇಳೆ ಈ ಸೂಚನೆ ಮೀರಿದರೆ ಅದನ್ನು ಭದ್ರತಾ ಲೋಪವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದರೆ, ಪದೇ ಪದೇ ವಿಧಾನಸೌಧದಲ್ಲಿ ನಡೆಯುತ್ತಿರುವ ನೈಜ ಭದ್ರತಾ ಲೋಪಗಳನ್ನು ಸರಿಪಡಿಸುವ ಬದಲು ಮಾಧ್ಯಮಗಳನ್ನೇ ಗುರಿ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಅರಣ್ಯ ಸಚಿವ ಖಂಡ್ರೆಗೆ ನಿಂದನೆ ಆರೋಪ | ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ FIR


















