ಬೆಂಗಳೂರು: ಇತ್ತೀಚೆಗೆ ಅಗತ್ಯ ವಸ್ತುಗಳ ದರ ಏರಿಕೆಯಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ. ಈ ಮಧ್ಯೆ ಮತ್ತೊಮ್ಮೆ ಹಾಲಿನ ದರ ಏರಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಕರ್ನಾಟಕ ಹಾಲು ಒಕ್ಕೂಟ (KMF) ನಂದಿನಿ ಹಾಲಿನ (Nandini Milk) ದರ ಮತ್ತೆ ಏರಿಯಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಲೀಟರ್ ಹಾಲಿಗೆ 50 ಎಂಎಲ್ ಹೆಚ್ಚುವರಿ ಹಾಲು ನೀಡಿ, 2 ರೂ. ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಹಾಲಿನ ದರ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ರೈತರು ಹಾಗೂ ಹಾಲು ಒಕ್ಕೂಟಗಳು ಪ್ರತಿ ಲೀಟರ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್ಗೆ ಮನವಿ ಮಾಡಿವೆ. ಈ ಬಗ್ಗೆ ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.
ಇತ್ತೀಚೆಗೆ ಲೀಟರ್ ಹಾಲಿನ ಪಾಕೆಟ್ ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂ. ಏರಿಕೆ ಮಾಡಲಾಗಿತ್ತು. ಹೀಗಾಗಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಿತ್ತು. ಒಂದು ಲೀಟರ್ ಹಾಲಿನ ದರ 42 ರೂ.ನಿಂದ 44 ರೂ.ಗೆ ಏರಿಕೆಯಾಗಿತ್ತು. ಈಗ ಮತ್ತೆ ಏರಿಸಲು ಸರ್ಕಾರ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಅಲ್ಲದೇ, ರೈತರಿಂದ ಖರೀದಿಸುತ್ತಿದ್ದ ದರವನ್ನು ಕೂಡ ಇಳಿಕೆ ಮಾಡಿತ್ತು. ಹಿಂದೆ 35 ರೂ.ಗೆ ಹಾಲು ಖರೀದಿಸಲಾಗುತ್ತಿತ್ತು. ಈಗ 30 ರೂಪಾಯಿ 15 ಪೈಸೆಗೆ ಹಾಲು ಖರೀದಿಸಲಾಗುತ್ತಿದೆ.