ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಪಿಡಿಓ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಪ್ರತಿಭಟನೆ ಕೈ ಬಿಡುವಂತೆ ಎಚ್ಚರಿಕೆ ನೀಡಿದೆ.
ಕೂಡಲೇ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ಸೂಚಿಸಿದೆ. ಒಂದು ವೇಳೆ ಇದನ್ನು ಮೀರಿ ಪ್ರತಿಭಟಿಸಿದರೆ, ಮುಂದಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಈಗಾಗಲೇ ಪ್ರತಿಭಟನಾ ನಿರತರಿಗೆ ನೋಟಿಸ್ ನೀಡಿದ್ದು, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಎಲ್ಲಾ ವೃಂದ ಸಂಘಗಳ ನೇತೃತ್ವದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆಗಳನ್ನು ನಿಲ್ಲಿಸಿ ಹೋರಾಟ ನಡೆಸುತ್ತಿದ್ದಾರೆ.
2021 ನಿಯಮ 9 ರಂತೆ ಯಾವುದೇ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆಗೆ ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರಿ ನೌಕರರೊಡನೆ ಸೇರಿ ಯಾವುದೇ ಬಗೆಯ ಮುಷ್ಕರಕ್ಕೆ ತೊಡಗುವಂತಿಲ್ಲ. ಆದರೆ, ಇದನ್ನು ಮೀರಿ ಹೋರಾಟ ನಡೆಸುತ್ತಿರುವುದಕ್ಕೆ ಸರ್ಕಾರ ಗರಂ ಆಗಿದೆ.