ತೆಲುಗು ಚಿತ್ರ ರಂಗಕ್ಕೆ ತೆಲಂಗಾಣ ಸರ್ಕಾರ ಶಾಕ್ ನೀಡಿದೆ.
ತೆಲುಗು ಚಿತ್ರರಂಗ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಾಕ್ಸ್ ಕಲೆಕ್ಷನ್ ಮಾಡುತ್ತಿರುವ ಚಿತ್ರರಂಗ. ಆದರೆ, ಈಗ ತೆಲಂಗಾಣ ಸರ್ಕಾರ ತೆಲುಗು ಚಿತ್ರರಂಗಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಚಿತ್ರದ ಮಂದಿ ಈಗ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ತೆಲುಗು ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರಗಳು ಕಡಿಮೆ ಇವೆ. ಆದರೆ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವ ಸಂದರ್ಭದಲ್ಲಿ ನಿರ್ಮಾಪಕರು, ಸರ್ಕಾರದ ಬಳಿ ಮನವಿ ಮಾಡಿಕೊಂಡು ಟಿಕೆಟ್ ಬೆಲೆ ಹೆಚ್ಚಳ ಹಾಗೂ ಹೆಚ್ಚುವರಿ ಶೋ ಹಾಕಿಕೊಳ್ಳಲು ಅನುಮತಿ ಪಡೆಯುತ್ತಿದ್ದರು. ಆದರೆ, ಇದಕ್ಕೆ ಈಗ ಬ್ರೇಕ್ ಬಿದ್ದಿದೆ.
‘ಪುಷ್ಪ 2’ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ಆದ ಅಪಘಾತದ ನಂತರ ತೆಲಂಗಾಣ ಸರ್ಕಾರ, ತೆಲುಗು ಚಿತ್ರರಂಗದ ವಿರುದ್ಧ ಹಲವು ನಿಯಮ ಜಾರಿಗೆ ತಂದಿದೆ. ಸಂಧ್ಯಾ ಚಿತ್ರ ಮಂದಿರದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದ ತೆಲಂಗಾಣ ಸಚಿವ ವೆಂಕಟ ರೆಡ್ಡಿ, ‘ಪುಷ್ಪ 2’ ಸಿನಿಮಾ ಹಾಗೂ ಅಲ್ಲು ಅರ್ಜುನ್ ರನ್ನು ಟೀಕಿಸಿದ್ದಾರೆ. ಅಲ್ಲದೇ, ಸಿನಿಮಾಗಳಿಗೆ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ವಿಶೇಷ ಶೋ, ಬೆನಿಫಿಟ್ ಶೋಗಳನ್ನು ರದ್ದು ಮಾಡಲಾಗುತ್ತಿದೆ. ಮಾತ್ರವಲ್ಲದೆ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ದರ ಹೆಚ್ಚಳ ಸವಲತ್ತನ್ನು ಸಹ ಹಿಂಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸರ್ಕಾರದ ಈ ನಿರ್ಧಾರ ಸಿನಿಮಾ ಮಂದಿಗೆ ಶಾಕ್ ನೀಡಿದೆ.