ಕೇರಳದ ವಯನಾಡಿನಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು 400ಕ್ಕೂ ಅಧಿಕ ಜನರ ಪ್ರಾಣ ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಇಡೀ ಜಗತ್ತೇ ಈ ಘಟನೆಗೆ ಮರಗುತ್ತಿದೆ. ಹೀಗಾಗಿ ಎಲ್ಲ ರಾಜ್ಯಗಳು, ಸೆಲೆಬ್ರಿಟಿಗಳು, ವ್ಯಾಪಾರಸ್ಥರು, ಜನರು ಕೈಲಾದಷ್ಟು ಸಹಾಯ ಮಾಡಿ ನೊಂದವರ ಕಣ್ಣೀರು ಒರೆಸುವ ಕಾಯಕ ಮಾಡುತ್ತಿದ್ದಾರೆ.
ಹೀಗೆ ನಿಧಿ ಸಂಗ್ರಹಿಸಲು 13 ವರ್ಷದ ಬಾಲಕಿಯೊಬ್ಬಳು ಸತತ 3 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕೈಗೆ ನಿಧಿ ಸಂಗ್ರಹಿಸಿ ನೀಡಿದ್ದಾಳೆ. ಈ ಕಾರ್ಯಕ್ಕೆ ಸಿಎಂ ಶ್ಲಾಘಿಸಿದ್ದಾರೆ.
ಹರಿಣಿ ಶ್ರೀ, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತನ್ನ ಉಳಿತಾಯ ಸೇರಿದಂತೆ 15 ಸಾವಿರ ರೂ. ನೀಡಿದ್ದಾಳೆ. ತಮ್ಮ ಭರತನಾಟ್ಯವನ್ನು ಫೋನ್ ನಲ್ಲಿ ರೆಕಾರ್ಡ್ ಮಾಡಿ ಮುಖ್ಯಮಂತ್ರಿಗೆ ತೋರಿಸಿದ್ದಾಳೆ. ಬಾಲಕಿಯ ಈ ಕಾರ್ಯಕ್ಕೆ ಹಾಗೂ ಮನಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಜುಲೈ 30ರಂದು ಸುರಿದ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಭೂಕುಸಿತ ಆಗಿತ್ತು. ಹೀಗಾಗಿ ನೂರಾರು ಮನೆಗಳು ಬೃಹತ್ ಗುಡ್ಡ ಕುಸಿತಕ್ಕೆ ಸಿಲುಕಿ ನೆಲಸಮಗೊಂಡಿವೆ. ಜನರು ಅವಶೇಷಗಳಡಿ ಸಿಲುಕಿದರು.ದುರಂತದಲ್ಲಿ ಇಲ್ಲಿಯವರೆಗೆ 417 ಜನ ಬಲಿಯಾಗಿದ್ದಾರೆ. ಹೀಗಾಗಿ ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ವಿಪಕ್ಷಗಳ ನಾಯಕರು ಮನವಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಶನಿವಾರ ವಯನಾಡಿಗೆ ಭೇಟಿ ನೀಡಲಿದ್ದಾರೆ.