ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ಜೀವನದಲ್ಲೇ, ಇದೇ ಮೊದಲ ಬಾರಿಗೆ ಇಕ್ಕಟ್ಟಿಕೆ ಸಿಲುಕಿದ್ದಾರೆ. ಹೀಗಾಗಿ ಸಿಎಂ ಯಾವ ರೀತಿ ಈ ಪ್ರಕರಣದಿಂದ ಹೊರ ಬರುತ್ತಾರೆ ಎಂಬ ಚರ್ಚೆ ಈಗ ಶುರುವಾಗಿದೆ.
ಸಿಎಂ ಸಿದ್ದರಾಮಯ್ಯ ಯಾವಾಗಲೂ ನಿಷ್ಕಳಂಕ ರಾಜಕಾರಣಿ ಎಂಬ ಖ್ಯಾತಿ ಗಳಿಸಿದ್ದರು. ಈಗ ಇಂತಹ ನಾಯಕರಿಗೆ ಮುಡಾ ಹಗರಣ ಸುತ್ತಿಕೊಂಡಿದೆ. ಸಿಎಂ ಆಗಿದ್ದಾಗಲೇ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದರಿಂದಾಗಿ ಅವರಿಗೆ ಸಂಕಷ್ಟ ದೊಡ್ಡದಾಗಿದೆ. ಮುಡಾ ಪ್ರಕರಣದಲ್ಲಿ ಸಿಎಂ ಮೊದಲ ಆರೋಪಿ. ಪತ್ನಿ ಎರಡನೇ ಆರೋಪಿಯಾಗಿದ್ದಾರೆ.
ಈಗಾಗಲೇ ಎಫ್ ಐಆರ್ ದಾಖಲಾಗಿದ್ದರಿಂದಾಗಿ ಸಿಎಂ ಹಾಗೂ ಕುಟುಂಬಸ್ಥರ ವಿರುದ್ಧ ತನಿಖೆ ಆರಂಭವಾಗಲಿದೆ. ಮೊದಲು ದೂರು ನೀಡಿದವರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 1996ರಿಂದ 2023 ರವರೆಗಿನ ದಾಖಲೆ ಪರಿಶೀಲನೆ ನಡೆಯುತ್ತದೆ. ಮೂಲ ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ವಿಚಾರಣೆಗೆ ಕರೆಯಲಾಗುತ್ತದೆ.
ಆದರೆ, ಪ್ರಕರಣದಲ್ಲಿ ಸಿಎಂ ಅರೆಸ್ಟ್ ಆಗುತ್ತಾರಾ? ಎಂಬ ಅನುಮಾನ ಕೂಡ ಶುರುವಾಗಿದೆ. ಆದರೆ, ಸಿಎಂ ವಿಚಾರಣೆಗೆ ಬಂದಿದ್ದ ಸಂದರ್ಭದಲ್ಲಿ ಅರೆಸ್ಟ್ ಮಾಡುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಬಂಧನದ ಭೀತಿ ಇದ್ದರೆ ಎಲ್ಲ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ, ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು. FIR ರದ್ದು ಮಾಡುವಂತೆ ಹೈಕೋರ್ಟ್ಗೂ ಮನವಿ ಮಾಡುವುದಕ್ಕೂ ಅವಕಾಶಗಳಿದ್ದು, ಒಂದು ವೇಳೆ ಎಫ್ ಐಆರ್ ಗೆ ತಡೆಯಾಜ್ಞೆ ಸಿಕ್ಕರೆ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ಸಮಾಧಾನ ಸಿಗಲಿದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.
ಈಗಾಗಲೇ ಸಿಎಂ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಜ್ಯಪಾಲರ ಅನುಮತಿಗೆ ತಡೆ ಸಿಕ್ಕರೂ ಸ್ವಲ್ಪ ಮಟ್ಟಿಗೆ ಆರಾಮಾಗಲಿದ್ದಾರೆ. ಆದರೆ, ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾಯ್ದು ನೋಡಬೇಕಿದೆ.