ಸತೀಶ್ ನೀನಾಸಂ ನಟಿಸುತ್ತಿರುವ ‘ಅಶೋಕ ಬ್ಲೇಡ್’ ಚಿತ್ರವೀಗ ‘ದ ರೈಸ್ ಆಫ್ ಅಶೋಕ’ ಎಂದು ಶೀರ್ಷಿಕೆ ಬದಲಿಸಿಕೊಂಡು ಮತ್ತೆ ಸೆಟ್ಟೇರುತ್ತಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಗೊಂಡಿದೆ. ಇದರ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ ಬಳಿಕ ಚಿತ್ರ ನಿಂತು ಹೋಗಿತ್ತು. ಇದೀಗ ಸತೀಶ್ ನೀನಾಸಂ ಚಿತ್ರವನ್ನು ಮತ್ತೆ ಕೈಗೆತ್ತಿಕೊಂಡಿದ್ದು, ‘ಕ್ಷೇತ್ರಪತಿ’, ‘ಅವತಾರ ಪುರುಷ’ ಸೇರಿದಂತೆ ಹಲವು ಚಿತ್ರಗಳಿಗೆ ಸಂಕಲನಕಾರರಾಗಿದ್ದ ಮನು ಶೆಡ್ಗಾರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
‘ಫೆ.15ರಿಂದ ಚಿತ್ರೀಕರಣ ಮುಂದುವರಿಸುತ್ತೇವೆ. ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಿದೆ. ನನ್ನ ವೃತ್ತಿಜೀವನದಲ್ಲಿ ಈತನಕದ ಅತ್ಯುತ್ತಮ ಸಿನಿಮಾವಿದು. ಕಂಟೆಂಟ್ ಅಷ್ಟು ಅದ್ಭುತವಾಗಿದೆ. ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ವಿನೋದ್ ಅವರ ಕನಸಿನ ಚಿತ್ರವಾಗಿತ್ತು. ಹೀಗಾಗಿ ಈ ಸಿನಿಮಾ ಪೂರ್ಣಗೊಳಿಸಬೇಕೆಂದು ಪಣತೊಟ್ಟು ಮುಂದುವರಿಸುತ್ತಿದ್ದೇವೆ’ ಎನ್ನುತ್ತಾರೆ ಸತೀಶ್.
ಬಿ.ಸುರೇಶ್, ಗೋಪಾಲ ದೇಶಪಾಂಡೆ ಮೊದಲಾದವರು ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಲವಿತ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
‘ಸದ್ಯ ಮಹೇಶ್ ನಿರ್ದೇಶಿಸುತ್ತಿರುವ, ರಚಿತಾ ರಾಮ್ ನಾಯಕಿಯಾಗಿರುವ ‘ಅಯೋಗ್ಯ 2’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವೆ. ಅದರ ಮೊದಲ ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆ ಈ ಚಿತ್ರ ಕೈಗೆತ್ತಿಕೊಳ್ಳುತ್ತೇವೆ. ವೃದ್ಧಿ ಕ್ರಿಯೇಷನ್ಸ್ ಜೊತೆಗೆ ನಾನು ನಿರ್ಮಾಣದಲ್ಲಿ ಕೈಜೋಡಿಸುತ್ತಿರುವೆ’ ಎಂದು ಸತೀಶ್ ಮಾಹಿತಿ ನೀಡಿದರು.