ತಮಿಳು ಚಿತ್ರರಂಗದ ಖ್ಯಾತ ನಟ ಡೆಲ್ಲಿ ಗಣೇಶ್ ಇಹಲೋಕ ತ್ಯಜಿಸಿದ್ದಾರೆ.
400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಡೆಲ್ಲಿ ಗಣೇಶ್, ವಯೋಹಸಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಡೆಲ್ಲಿ ಗಣೇಶ್ ಅವರ ಪುತ್ರ ಮಹದೇವನ್ ಸಾವಿನ ಸುದ್ದಿ ಖಚಿತ ಪಡಿಸಿದ್ದಾರೆ.
ಡೆಲ್ಲಿ ಗಣೇಶನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು 40 ವರ್ಷಗಳಿಗಿಂತಲೂ ಅಧಿಕ ಸಮಯ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕೆ ಬಾಲಚಂಧರ್ ಅವರಂಥಹಾ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್, ಹಲವು ಸ್ಟಾರ್ ನಟ-ನಟಿಯರೊಟ್ಟಿಗೆ ನಟಿಸಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್ ಪಾತ್ರಗಳಲ್ಲಿ ನಟಿಸಿದ್ದ ಡೆಲ್ಲಿ ಆನಂತರ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಾಸ್ಯ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಅಲ್ಲದೇ, ಹಲವಾರು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಡೆಲ್ಲಿ ಗಣೇಶ್ ಸಾವಿಗೆ ಇಡೀ ಚಿತ್ರರಂಗ ಸಂತಾಪ ಸೂಚಿಸುತ್ತಿದೆ.