ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದಾರೆ.
ಹೆದ್ದಾರಿಯಲ್ಲಿ 2 ಲಾರಿ, 2 ಕಾರು ಹಾಗೂ ಸ್ಕೂಲ್ ಬಸ್‌ನ ನಡುವೆ ಅಪಘಾತ ಸಂಭವಿಸಿದೆ. ಇದರಲ್ಲಿ ಕಾರಿನಲ್ಲಿದ್ದ ಎಲ್ಲ 6 ಜನರು ಲಾರಿಯ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ. ಕಂಟೇನರ್ ಲಾರಿಯೊಂದು ತನ್ನ ಎದುರಿಗಿದ್ದ ವಾಹನಕ್ಕೆ ಗುದ್ದಿ ಪಲ್ಟಿಯಾಗಿದೆ. ಆಗ ಕಂಟೇನರ್ ಲಾರಿಯ ಪಕ್ಕದಲ್ಲಿಯೇ ಇದ್ದ ವೋಲ್ವೋ ಕಾರಿನ ಮೇಲೆ ಅದು ಉರುಳಿ ಬಿದ್ದಿದೆ.
ಕಂಟೇನರ್ ಲಾರಿ ಉರುಳಿಬಿದ್ದ ರಭಸಕ್ಕೆ ಕಾರಿನಲ್ಲಿದ್ದ ಎಲ್ಲ 6 ಜನರು ಅಪ್ಪಚ್ಚಿಯಾಗಿದ್ದಾರೆ. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಇಂಜಿನಿಯರ್ ಆಗಿರುವ ಚಂದ್ರಮ್ ಅವರ ಕುಟುಂಬ ಬಲಿಯಾಗಿದೆ. ಚಂದ್ರಮ್ ಅವರು ಐಎಎಸ್ ಟಿ ಸಲ್ಯೂಷನ್ ಎನ್ನುವ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದರು. IAST ಸಾಫ್ಟ್ವೇರ್ ಸಲ್ಯೂಷನ್ ನ ಎಂಡಿ, ಸಿಇಒ ಆಗಿ ಚಂದ್ರಮ್ ಕೆಲಸ ಮಾಡುತ್ತಿದ್ದರು. ಆಟೋಮೋಟಿವ್, ಎಂಬೆಡೆಡ್ ಸಾಫ್ಟ್ವೇರ್ ಡೆವಲ್ಪಮೆಂಟ್ ಕಾರ್ಯವನ್ನು ಕಂಪನಿ ಮಾಡುತ್ತಿತ್ತು. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಚಂದ್ರಮ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದರು.
ವೀಕೆಂಡ್ ಪ್ರವಾಸಕ್ಕೆಂದು ಕುಟುಂಬದೊಂದಿಗೆ ಅವರು ಹೊರಗೆ ಹೋಗಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಾರೆ. ಹಲವರು ದುಃಖದ ಮಡುವಿನಲ್ಲಿ ಬಿದ್ದಿದ್ದು, ಕಣ್ಣೀರಿಡುತ್ತ ಮನೆಗೆ ಹೋಗಿದ್ದಾರೆ.