ದಾವಣಗೆರೆ: ಮೈಕ್ರೋ ಫೈನಾನ್ಸ್ ಕಾಟ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ಅಲ್ಲಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ಆರೋಪಗಳು ಕೇಳಿ ಬರುತ್ತಿವೆ. ನಾಲ್ಕು ಕುಟುಂಬಗಳು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಊರು ತೊರೆದಿರುವ ಘಟನೆ ನಡೆದಿದೆ.
ಈ ಘಟನೆ ಚನ್ನಗಿರಿ ತಾಲ್ಲೂಕಿನ ಶಿವಗಂಗನಾಳ ಗ್ರಾಮದಲ್ಲಿ ನಡೆದಿದೆ. ಸಾಲದ ಕಂತು ಕಟ್ಟುವಂತೆ ಮೈಕ್ರೋ ಪೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಲಕ್ಷ್ಮಮ್ಮ, ಶಾಂತಮ್ಮ, ತಿಮ್ಮಕ್ಕ, ಸುನಂದಮ್ಮ ಎಂಬುವವರ ಕುಟುಂಬಗಳು ಊರು ಬಿಟ್ಟಿವೆ ಎನ್ನಲಾಗಿದೆ.
ಈ ಕುಟುಂಬಗಳು 50 ಸಾವಿರ ರೂ. ಹಾಗೂ 1 ಲಕ್ಷ ರೂ. ಸಾಲ ಪಡೆದಿದ್ದವು. ಈಗ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳದಿಂದಾಗಿ ಬೇಸತ್ತ ಈ ಕುಟುಂಬಗಳು ಬೇರೆ ಊರಿಗೆ ಹೋಗಿ ಜೀವನ ನಡೆಸುತ್ತಿವೆ. ವಸೂಲಿಗೆ ಬಂದವರು ಕೆಲವೊಮ್ಮೆ ಪೊಲೀಸ್ ಠಾಣೆಗೆ ಹೋಗುವುದಿದೆ ಬನ್ನಿ ಎಂದು ಬೈಕ್ ನಲ್ಲಿ ಕೂರಿಸಿಕೊಂಡು ಅರ್ಧದಾರಿಯಲ್ಲೇ ಬಿಟ್ಟು ಹೋಗಿದ್ದಾರೆಂದು ಮಹಿಳೆಯರು ಆರೋಪಿಸಿದ್ದಾರೆ.
ಹೀಗಾಗಿ ನಿತ್ಯ ಕಿರುಕುಳಕ್ಕೆ ಬೇಸತ್ತು ಗ್ರಾಮವನ್ನೇ ತೊರೆದಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರೈತ ಸಂಘದ ಮುಖಂಡರು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಕಿರುಕುಳ ನೀಡಿದ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.