ಬೆಂಗಳೂರು: ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ. ಚುನಾವಣೆ ಆಯೋಗದಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಮತ ಕಳ್ಳತನ ಬಗ್ಗೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ರಾಮಲಿಂಗಾರೆಡ್ಡಿ, ಲೋಕಸಭೆ ಚುನಾವಣೆ ವೇಳೆ ಮೂರನೇ ಎಲೆಕ್ಷನ್ ಆಗುವ ಹೊತ್ತಿಗೆ ಬಿಜೆಪಿಯವರ ಜನಪ್ರಿಯತೆ ಕಡಿಮೆ ಆಯಿತು. ಹೀಗಾಗಿ ಗೆಲ್ಲುವುದಕ್ಕೆ ದೇಶದ ಎಲ್ಲಾ ಭಾಗದಲ್ಲಿ ಮತ ತೆಗೆಯುವ ಕೆಲಸ ಮಾಡಿದರು. ಮಹದೇವಪುರ, ಆಳಂದ ಸೇರಿ ಹಲವು ಕಡೆ ಹೀಗೆ ಮಾಡಿದ್ದಾರೆ. ಬಿಜೆಪಿ ಅವರು ಅಧಿಕಾರ ಇರುವ ಕಡೆ ವಿಪಕ್ಷಗಳ ಕ್ಷೇತ್ರದ ಕಡೆ ಜಾಸ್ತಿ ಮಾಡಿದ್ದಾರೆ. ಇಂತಹ ಮತ ಅಕ್ರಮ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆಯಾಗಿದೆ. ನಮಗೆ ಕಮಿಷನ್‌ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂಕೋರ್ಟ್‌ಗೆ ಹೋಗಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮತ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಎಲೆಕ್ಷನ್ ಕಮಿಷನ್ ಮೋದಿ, ಅಮಿತ್ ಶಾ ಅವರು ಹೇಳಿದ್ದಕ್ಕೆ ಮುದ್ರೆ ಒತ್ತುತ್ತಾರೆ. ಕಾಂಗ್ರೆಸ್ ಪ್ರಬಲ ಇರುವ ಕಡೆ ಅಕ್ರಮ ಮಾಡುತ್ತಿದ್ದಾರೆ. ಮತ ತೆಗೆಯುವುದು ಅಲ್ಲ. ಸೇರಿಸುವ ಕೆಲಸ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 40-50 ಲಕ್ಷ ಮತ ಸೇರ್ಪಡೆ ಮಾಡಿದ್ದಾರೆ. ಇವರು ಮಹಾರಾಷ್ಟ್ರ ಚುನಾವಣೆ ಮೋಸದಿಂದ ಗೆದ್ದಿದ್ದು. ಆಳಂದ, ಗಾಂಧಿನಗರ ಸೇರಿ ಬೇಕಾದಷ್ಟು ಕಡೆ ಈ ಅಕ್ರಮ ಆಗಿದೆ ಎಂದು ಆರೋಪಿಸಿದ್ದಾರೆ.



















