ಚಿಕ್ಕಮಗಳೂರು: ವೈದ್ಯನೊಬ್ಬ ಪತ್ನಿಯನ್ನು ಗೃಹ ಬಂಧನದಲ್ಲಿಟ್ಟು ಕಿರುಕುಳ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ದೋಣಿಕಣ ಬಡಾವಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೃಹ ಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ವೈದ್ಯನೊಬ್ಬ ತನ್ನ ಪತ್ನಿಯನ್ನು ಮನೆಯಲ್ಲೇ ಬಂಧಿಸಿ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪತಿ ಡಾ. ರವಿಕುಮಾರ್ ಕೃತ್ಯ ಎಸಗಿದ ಪತಿ ಎನ್ನಲಾಗಿದೆ. ವೈದ್ಯ ಡಾ. ರವಿಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. 22 ವರ್ಷಗಳ ಹಿಂದೆ ವಿನುತಾರಾಣಿ (48) ಅವರನ್ನು ವಿವಾಹವಾಗಿದ್ದ. ಆದರೆ, ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಬೇರೆ ಬೇರೆಯಾಗಿದ್ದರು. ಕಳೆದ 1 ವರ್ಷದ ಹಿಂದೆ ವಿಚ್ಛೇದನ ನೀಡಿ, ಮನೆಯಲ್ಲಿ ಕೂಡಿ ಹಾಕಿದ್ದ ಎನ್ನಲಾಗಿದೆ.
ಮಹಿಳೆಗೆ ಊಟದಲ್ಲಿ ಮತ್ತಿನ ಔಷಧ ನೀಡುತ್ತಿದ್ದ. ಅಲ್ಲದೇ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದ. ವಿನುತಾ ರಾಣಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆರೋಪಿ ನಾಪತ್ತೆಯಾಗಿದ್ದಾನೆ.