ಭೂಪಾಲ್: ವೈದ್ಯನೊಬ್ಬ ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
2 ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಗೆ ಆಪರೇಷನ್ ಮಾಡಿದ್ದ ವೈದ್ಯರು ಆಕೆಯ ಹೊಟ್ಟೆಯೊಳಗೆ ಕತ್ತರಿ ಬಿಟ್ಟಿರುವ ವಿಷಯ ಈಗ ಬೆಳಕಿಗೆ ಬಂದಿದೆ. 2 ವರ್ಷಗಳ ಹಿಂದೆ ಗ್ವಾಲಿಯರ್ನ ಸರ್ಕಾರಿ ಆಸ್ಪತ್ರೆಯಲ್ಲಿ ಆ ಮಹಿಳೆ ಆಪರೇಷನ್ ಮಾಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವೈದ್ಯರು ಕತ್ತರಿಯನ್ನು ಹೊಟ್ಟೆಯೊಳಗೆ ಬಿಟ್ಟಿದ್ದಾರೆ.
ಭಿಂಡ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ರೋಗಿಯ ಕುಟುಂಬದವರು ಸಿಟಿ ಸ್ಕ್ಯಾನ್ನಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಪತ್ತೆಯಾಗಿದ್ದರಿಂದ ಆಘಾತಕ್ಕೊಳಗಾಗಿದ್ದಾರೆ. ಭಿಂಡ್ ಜಿಲ್ಲೆಯ ನಿವಾಸಿ ಕಮಲಾ ಅವರಿಗೆ ಹೊಟ್ಟೆಯ ಕ್ಯಾನ್ಸರ್ಗಾಗಿ 2022ರ ಫೆಬ್ರವರಿ 20ರಂದು ಗ್ವಾಲಿಯರ್ನ ಕಮಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಆಪರೇಷನ್ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿದ್ದಾರೆ. ಮಹಿಳೆಗೆ ಇದರ ಅರಿವೇ ಇರಲಿಲ್ಲ. ಕಳೆದ ಕೆಲವು ದಿನಗಳಿಂದ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಔಷಧಿ ನೀಡಿದರೂ ನೋವು ಕಡಿಮೆಯಾಗದಿದ್ದಾಗ, ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಲು ಹೇಳಿದ್ದಾರೆ. ಆಗ ಈ ವಿಷಯ ಬೆಳಕಿಗೆ ಬಂದಿದೆ.