ಬೆಂಗಳೂರು: ದೇವಸ್ಥಾನದಲ್ಲಿ ಬರುವ ಕಾಣಿಕೆ ದುಡ್ಡು ಮಸೀದಿ, ಚರ್ಚ್ ಗಳಿಗೆ ಹೋಗುತ್ತಿವೆ. ಅವುಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದೇವಸ್ಥಾನಗಳಲ್ಲಿ ಫಲಕ ಹಾಕಲು ನಿರ್ಧರಿಸಿದೆ.
ರಾಜ್ಯದ ಮುಜರಾಯಿ ಇಲಾಖೆಯ 36 ಸಾವಿರ ದೇಗುಲಗಳಲ್ಲಿ ಫಲಕ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಎಲ್ಲಾ ದೇವಸ್ಥಾನಗಳಲ್ಲಿ ಫಲಕ ಹಾಕಲು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ. ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ರಾಜ್ಯದ 36,000 ದೇವಸ್ಥಾನಗಳಲ್ಲೂ ಫಲಕ ಹಾಕಲು ಸಚಿವರು ಸೂಚಿಸಿದ್ದಾರೆ. ಹಾಸನಾಂಬೆ, ಕೊಪ್ಪಳದ ಹುಲಿಗೆಮ್ಮ, ಸವದತ್ತಿ ಯಲ್ಲಮ್ಮ ಸೇರಿದಂತೆ ಹಲವು ದೇವಸ್ಥಾನಗಳಿಂದ ಕಾಣೆಕೆಯು ಹರಿದು ಬರುತ್ತಿದೆ. ಈ ಬಾರಿ ಹಾಸನಾಂಬೆಗೆ 12.63 ಕೋಟಿ ಆದಾಯ ಬಂದಿದೆ.
ದೇವಸ್ಥಾನದಿಂದ ಬಂದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಹಿಂದೂ ದೇಗುಲದ ಹಣವನ್ನು ಮಸೀದಿ, ಚರ್ಚ್ಗಳ ಅಭಿವೃದ್ಧಿ ನೀಡಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದರು. ಆದರೆ, ಆ ಹಣವನ್ನು ಮೂಲಸೌಕರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಬೇರೆ ಯಾವುದೇ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿಲ್ಲ ಎಂದು ಇಲಾಖೆ ಹೇಳಿದೆ.