ಬೆಳಗಾವಿ: ಬಾಣಂತಿಯರ ಸಾವುಗಳು ಆಸ್ಪತ್ರೆಯಲ್ಲಿ ಆಗುತ್ತಲೇ ಇರುತ್ತವೇ. ಇದಕ್ಕೆಲ್ಲ ವೈದ್ಯಕೀಯ ಕಾರಣ ಎನ್ನಲು ಆಗುವುದಿಲ್ಲ. ದೇಶದಲ್ಲಿನ ಆರೋಗ್ಯ ಸೇವೆಗಳಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ವಿರೋಧ ಪಕ್ಷಗಳು ಏನೋ ಆರೋಪಿಸಿದರೂ ಉತ್ತರಿಸಲು ನಾವು ಸಿದ್ಧ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯಲಿ. ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವೈದ್ಯರ ಕೊರತೆ ಇದೆ. ವೈದ್ಯಕೀಯ ನೇಮಕಾತಿಯಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡದೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ವೈದ್ಯಕೀಯ ಸಿಬ್ಬಂದಿಗಳು, ಸ್ಟಾಫ್ ನರ್ಸ್ ಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನಮ್ಮ ಸರ್ಕಾರಕ್ಕೆ ಯಾವುದೇ ಕಳಂಕ ಇಲ್ಲ. ನಾವು ಯಾವುದೇ ಮಾಫಿಯಾದಲ್ಲಿ ಸಿಲುಕಿಲ್ಲ. ಬಿಜೆಪಿಯು ತಮ್ಮ ಅವಧಿಯಲ್ಲಿ ನಡೆದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮೊದಲು ಉತ್ತರ ನೀಡಲಿ. ನಮ್ಮ ಪ್ರಾಮಾಣಿಕ ಸರ್ಕಾರವನ್ನು ಪ್ರಶ್ನಿಸುವ ಯಾವುದೇ ಹಕ್ಕು ಬಿಜೆಪಿಗಾಗಲಿ ಅಥವಾ ಜೆಡೆಸ್ ಗಾಗಲಿ ಇಲ್ಲ ಎಂದಿದ್ದಾರೆ.