ಬೆಂಗಳೂರು: ನಟ ದರ್ಶನ್ ಗೆ ಹೈಕೋರ್ಟ್ ನೀಡಿದ್ದ ಗಡುವು ಮಂಗಳವಾರ ಮುಕ್ತಾಯವಾಗಲಿದೆ.
ಒಂದು ದಿನದಲ್ಲಿ ತಮ್ಮ ಚಿಕಿತ್ಸೆಯ ಮಾಹಿತಿಯನ್ನು ನಟ ಹೈಕೋರ್ಟ್ ಗೆ ನೀಡಬೇಕು. ಇಲ್ಲವಾದರೆ, ನ್ಯಾಯಾಂಗ ನಿಂದನೆ ಮಾಡಿದಂತಾಗುತ್ತದೆ. ದರ್ಶನ್ ಅವರು ಅಕ್ಟೋಬರ್ 30ರಂದು ಜಾಮೀನು ಪಡೆದಿದ್ದರು. ಈ ವೇಳೆ ಕೋರ್ಟ್ ಹಲವಾರು ಷರತ್ತುಗಳನ್ನು ವಿಧಿಸಿತ್ತು.
ಬಿಡುಗಡೆಯಾದ ಒಂದು ವಾರದಲ್ಲಿ ತಮ್ಮ ಚಿಕಿತ್ಸೆಯ ಸಂಪೂರ್ಣ ಮಾಹಿತಿ, ಶಸ್ತ್ರಚಿಕಿತ್ಸೆ ದಿನಾಂಕ ಮಾಹಿತಿಯನ್ನು ನೀಡಲು ಸೂಚಿಸಿತ್ತು. ಸದ್ಯ 6 ದಿನಗಳು ಮುಕ್ತಾಯವಾಗಿದ್ದು, ದರ್ಶನ್ ಕೋರ್ಟ್‌ಗೆ ಮಾಹಿತಿ ನೀಡಿಲ್ಲ. ದರ್ಶನ್ ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ವೈದ್ಯಕೀಯ ತಪಾಸಣೆಗೆ ಒಳಗಾಗಿ, ಶಸ್ತ್ರಚಿಕಿತ್ಸೆಯ ಸಂಭಾವ್ಯ ದಿನಾಂಕ, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಆನಂತರದ ಚಿಕಿತ್ಸೆಯ ಕುರಿತು ಮಾಹಿತಿ ನೀಡಬೇಕಾಗುತ್ತದೆ.
ದರ್ಶನ್ ಅವರು ಕಳೆದ ಎರಡು ದಿನದ ಹಿಂದೆ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸದ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ದರ್ಶನ್ ಗೆ ಕೋರ್ಟ್ 6 ವಾರಗಳ ಜಾಮೀನು ನೀಡಿದೆ.