ಬೆಂಗಳೂರು ಗ್ರಾಮಾಂತರ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಮಸ್ಯೆಯ ಪರಿಣಾಮವಾಗಿ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಅನ್ನ ಪ್ರಸಾದ ವಿತರಣೆಯಲ್ಲಿ ಬದಲಾವಣೆ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿ ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಪ್ರಸಾದ ವಿತರಣೆಯಲ್ಲೂ ಕಡಿತ ಮಾಡಲಾಗಿದೆ.
ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆಯಿಂದ ಅಡುಗೆ ಮಾಡಲು ಕೇವಲ ನಾಲ್ಕು ಸಿಲಿಂಡರ್‌ಗಳು ಮಾತ್ರ ಲಭ್ಯವಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಾಲಯ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಅಡುಗೆ ಸಿಬ್ಬಂದಿ ನಾಳೆಯಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ದೇವಾಲಯದ ಅಡುಗೆಮನೆಯಲ್ಲಿ ಈಗಾಗಲೇ ಸೌದೆ ಒಲೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ರಜೆ ದಿನಗಳಲ್ಲಿ ಸಾಮಾನ್ಯವಾಗಿ ಸುಮಾರು 12 ಸಾವಿರ ಭಕ್ತರು ದೇವಾಲಯದಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದರು. ಆದರೆ ಈಗ ಗ್ಯಾಸ್ ಸಮಸ್ಯೆಯಿಂದ ಕೇವಲ 5 ಸಾವಿರ ಜನರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲು ಪ್ರಸಾದ ವಿತರಣೆಯಲ್ಲಿ ನಾಲ್ಕು ವಿಧದ ಐಟಂಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಕೇವಲ ಒಂದು ಐಟಂ ಮಾತ್ರ ನೀಡಲಾಗುತ್ತಿದೆ. ಹಾಗೆಯೇ ಮೊದಲು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತಿಂಡಿ ವ್ಯವಸ್ಥೆ ಇದ್ದು, ನಂತರ ಮಧ್ಯಾನ್ಹ ಅನ್ನ-ಸಾಂಬಾರ್ ನೀಡಲಾಗುತ್ತಿತ್ತು.
ಆದರೆ ಇದೀಗ ಮಧ್ಯಾನ್ಹ ಅನ್ನ-ಸಾಂಬಾರ್ ವ್ಯವಸ್ಥೆಯನ್ನು ನಿಲ್ಲಿಸಿ, ಬೆಳಗ್ಗೆ 11 ಗಂಟೆಯಿಂದ ಮಾತ್ರ ತಿಂಡಿ ವಿತರಣೆ ಮಾಡಲಾಗುತ್ತಿದೆ ಎಂದು ದೇವಾಲಯ ಸಿಬ್ಬಂದಿ ತಿಳಿಸಿದ್ದಾರೆ. ಈ ಬದಲಾವಣೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಜಾರಿಯಲ್ಲಿವೆ.
ಇದನ್ನೂ ಓದಿ : ಹೋಟೆಲ್‌ನಲ್ಲಿ ತಿಂಡಿ ತಿಂದ್ರೂ ಬೀಳುತ್ತೆ ಗ್ಯಾಸ್ ಸಪ್ಲೈ ಚಾರ್ಜ್!



















