ಬೆಂಗಳೂರು: ವಿಭಿನ್ನ ಕತೆ ಹೊಂದಿರುವ ರಾವೆನ್ ಚಿತ್ರಕ್ಕೆ ಕಾಗೆ ಪ್ರಮುಖ ಪಾತ್ರಧಾರಿಯಾಗಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಕನ್ನಡದಲ್ಲಿ ಈ ಹಿಂದೆ ಕೂಡ ಪ್ರಾಣಿ ಹಾಗೂ ಪಕ್ಷಿಗಳನ್ನು ಕೇಂದ್ರವಾಗಿಟ್ಟಿಕೊಂಡು ಸಾಕಷ್ಟು ಚಿತ್ರಗಳು ನಿರ್ಮಾಣವಾಗಿದ್ದವು. ಈಗ ಈ ಸಾಲಿಗೆ ರಾವೆನ್ ಬಂದು ನಿಂತಿದೆ.
ವಿಶ್ವ ಪ್ರೊಡಕ್ಷನ್ಸ್ ಹಾಗೂ ಆತ್ಮ ಸಿನಿಮಾಸ್ ಲಾಂಛನದಲ್ಲಿ ವಿಶ್ವನಾಥ್.ಜಿ.ಪಿ ಹಾಗೂ ಪ್ರಬಿಕ್ ಮೊಗವೀರ್ ನಿರ್ಮಿಸಿರುವ ಹಾಗೂ ವೇದ್ ನಿರ್ದೇಶನದ “ರಾವೆನ್” ಚಿತ್ರದಲ್ಲಿ ಕಾಗೆ ಪ್ರಮುಖ ಪಾತ್ರಧಾರಿ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
“ರಾವೆನ್” ಎಂದರೆ ಕಾಗೆಯ ಹೆಸರು. ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಅದು ವಾಹನದ ಮೇಲೆ ಕೂತರೆ ವಾಹನವನ್ನೇ ಬದಲಿಸಬೇಕು. ಕಾಗೆ ಮನೆಯೊಳಗೆ ಬರಬಾರದು. ಇದು ಶ್ರಾದ್ಧಕ್ಕೆ ಮಾತ್ರ ಮೀಸಲಾದ ಪಕ್ಷಿ ಹೀಗೆ ಅನೇಕ ನಂಬಿಕೆಗಳು ರೂಡಿಯಲ್ಲಿದೆ. ಆದರೆ ಕಾಗೆಗಿರುವ ಒಳ್ಳೆಯ ಗುಣ ಬೇರೆ ಪಕ್ಷಿಗಳಲ್ಲಿ ನೋಡುವುದು ಕಡಿಮೆ. ಒಂದು ಹಿಡಿ ಅನ್ನ ಸಿಕ್ಕರೆ ತನ್ನ ಎಲ್ಲಾ ಬಳಗವನ್ನು ಕರೆದು ತಿನ್ನುವ ಪ್ರಾಣಿ ಕಾಗೆ ಮಾತ್ರ. ಇಂತಹ ಕಾಗೆಯನ್ನೇ ಪ್ರಧಾನವಾಗಿಟ್ಟಿಕೊಂಡು ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಿಕವಾಗಿ ನಮ್ಮ ಚಿತ್ರ ಹೆಚ್ಚು ಶ್ರೀಮಂತವಾಗಿದೆ ಎಂದು ನಿರ್ದೇಶಕ ವೇದ್ ಮಾತನಾಡಿದರು.
ನಿರ್ಮಾಪಕ ವಿಶ್ವನಾಥ್ ಮಾತನಾಡಿ, ನಮ್ಮ ತಂದೆ ಕನ್ನಡದ ಕೆಲವು ಜನಪ್ರಯ ಚಿತ್ರಗಳಲ್ಲಿ ನಟಿಸಿದ್ದರು. ಆ ದಿನಗಳಿಂದ ಸಿನಿಮಾ ಬಗ್ಗೆ ಆಸಕ್ತಿ. ಈಗ ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದೇನೆ. ನಾನು ಹಾಗೂ ಪ್ರಬಿಕ್ ಮೊಗವೀರ್ ಇಬ್ಬರು ನಿರ್ಮಾಣ ಮಾಡಿದ್ದೇವೆ. ಜೊತೆಗೆ ಒಂದು ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.
ಮತ್ತೋರ್ವ ನಿರ್ಮಾಪಕ ಪ್ರಬಿಕ್ ಮೊಗವೀರ್ ಮಾತನಾಡಿ, ಮೂಲತಃ ಸಂಕಲನಕಾರರಾಗಿರುವ ನಿರ್ದೇಶಕ ವೇದ್ ಅವರು ಈ ಚಿತ್ರದ ಕಥೆ ಹೇಳಿದಾಗ ನಿರ್ಮಾಣ ಮಾಡಲು ಮುಂದಾದೆ. ನಂತರ ನಿರ್ಮಾಣಕ್ಕೆ ವಿಶ್ವಾನಾಥ್ ಅವರು ಜೊತೆಯಾದರು. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ನಾಯಕಿ ಸ್ವಪ್ನ ಶೆಟ್ಟಿಗಾರ್, ನಟ ಲೀಲಾ ಮೋಹನ್, ಸಂಗೀತ ನಿರ್ದೇಶಕ MAD D ಹಾಗೂ ಛಾಯಾಗ್ರಾಹಕ ರಾಕೇಶ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು.