ಬೆಂಗಳೂರು: ಅತ್ಯಾಚಾರಕ್ಕೆ ತುತ್ತಾದ ಸಂತ್ರಸ್ತೆಯ ಮಗುವಿನ ದತ್ತು ಪ್ರಕ್ರಿಯೆಗೆ ತಂದೆ ಅಂದರೆ ಬಯೋಲಾಜಿಕಲ್ ಫಾದರ್ ಒಪ್ಪಿಗೆ ಅನಗತ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಗುವಿನ ದತ್ತು ಪ್ರಕ್ರಿಯೆಗೆ ಸೂಚಿಸಿದೆ.
ಈ ಕುರಿತು ಯಲಹಂಕ ಉಪ ನೋಂದಣಾಧಿಕಾರಿಗೆ ಹೈಕೋರ್ಟ್ ಆದೇಶ ನೀಡಿದೆ. 16 ವರ್ಷದ ಅತ್ಯಾಚಾರ ಸಂತ್ರಸ್ತೆ ಹಾಗೂ ತಾಯಿ ಮತ್ತು ದತ್ತು ಪಡೆಯಲು ಮುಂದಾಗಿರುವ ಬೆಂಗಳೂರಿನ ಮುಸ್ಲಿಂ ದಂಪತಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ, ತಂದೆಯ ಸಮ್ಮತಿ ಪತ್ರ ಬೇಕೆಂದು ಕೇಳದೆ 2024ರ ನ.11ರ ದತ್ತು ಡೀಡ್ ನ್ನು ನೊಂದಣಿ ಮಾಡಬೇಕು ಎಂದು ನಿರ್ದೇಶಿಸಿತು.
ದತ್ತು ಪ್ರಕ್ರಿಯೆ ನಡೆಯದಿದ್ದರೆ ಮಗು ಸಂವಿಧಾನದ ಕಲಂ 21ರ ಪ್ರಕಾರ ಜೀವಿಸುವ ಹಕ್ಕಿನಿಂದ ವಂಚಿತವಾಗುತ್ತದೆ. ಮಗುವಿನ ಬೆಳವಣಿಗೆ ಮತ್ತು ಯೋಗ ಕ್ಷೇಮದ ದೃಷ್ಟಿಯಿಂದ ಶಾಸನಾತ್ಮಕ ಹಕ್ಕಿಗಿಂತ ನೈತಿಕತೆ ಆಧಾರದ ಮೇಲೆ ಇಡೀ ಪ್ರಕರಣ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಸಂತ್ರಸ್ತೆ 2023ರ ನವೆಂಬರ್ 1 ರಿಂದ 2024ರ ಜೂನ್ 20ರ ಮಧ್ಯೆ ಅತ್ಯಾಚಾರಕ್ಕೆ ಒಳಗಾಗಿದ್ದರು. ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆದರೆ, ಸೆಪ್ಟೆಂಬರ್ 30 ರಂದು ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದರು