ವಾಷಿಂಗ್ಟನ್: ಹಾಲಿವುಡ್‌ನ ಸೂಪರ್‌ಹಿಟ್ ಹಾರರ್ ಸಿನಿಮಾ ‘ದಿ ಕಂಜೂರಿಂಗ್’ಗೆ ಸ್ಫೂರ್ತಿಯಾದ ಕುಖ್ಯಾತ ಫಾರ್ಮ್‌ಹೌಸ್ ಇದೀಗ ಹರಾಜಿಗೆ ಸಜ್ಜಾಗಿದೆ. “ದೆವ್ವ, ಭೂತದ ಕಾಟ ಇದೆ” ಎಂದು ನಂಬಲಾದ ಈ ಮನೆಯನ್ನು ಹ್ಯಾಲೋವೀನ್ ದಿನದಂದು 1.5 ಮಿಲಿಯನ್ ಡಾಲರ್‌ಗೆ(13.20 ಕೋಟಿ ರೂಪಾಯಿ) ಮಾರಾಟ ಮಾಡಲಾಗುತ್ತಿದ್ದು, ಯೂಟ್ಯೂಬರ್‌ಗಳು ಇದನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
‘ದಿ ಕಂಜೂರಿಂಗ್’ ಎಂಬ ಅತ್ಯಂತ ಯಶಸ್ವಿ ಹಾರರ್ ಸಿನಿಮಾ ಸರಣಿಗೆ ಸ್ಫೂರ್ತಿಯಾಗಿದ್ದ ಪುರಾತನ ಫಾರ್ಮ್‌ಹೌಸ್, ಹ್ಯಾಲೋವೀನ್ ಹಬ್ಬದ ಸಂದರ್ಭದಲ್ಲಿ ಸೇಲ್ ಆಗುತ್ತಿದೆ. ರೋಡ್ ಐಲ್ಯಾಂಡ್‌ನಲ್ಲಿರುವ 18ನೇ ಶತಮಾನದ ಈ ಮನೆಯನ್ನು ಅಕ್ಟೋಬರ್ 31 ರಂದು ಹರಾಜಿನಲ್ಲಿ ಮಾರಾಟ ಮಾಡಲಾಗುವುದು ಎಂದು ಜೆ.ಜೆ.ಮ್ಯಾನಿಂಗ್ ಆಕ್ಷನಿಯರ್ಸ್ ಸಂಸ್ಥೆ ತಿಳಿಸಿದೆ.

ಈ ಆಸ್ತಿಯು 8.5 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, 3,000 ಚದರ ಅಡಿಯ ಮನೆಯಲ್ಲಿ 14 ಕೊಠಡಿಗಳಿವೆ. ಇದರಲ್ಲಿ ಮೂರು ಮಲಗುವ ಕೋಣೆಗಳು ಮತ್ತು ಒಂದು ಗ್ರಂಥಾಲಯವೂ ಸೇರಿದೆ.
ಮನೆಯ ಹಿನ್ನೆಲೆ
ಭೂತದ ಕಾಟ ಇದೆ ಎಂದು ನಂಬಲಾದ ಈ ಫಾರ್ಮ್‌ಹೌಸ್ 1970ರ ದಶಕದಲ್ಲಿ ಪೆರಾನ್ ಕುಟುಂಬಕ್ಕೆ ಸೇರಿತ್ತು. ಅವರು ಮನೆಯಲ್ಲಿ ಹಿಂಸಾತ್ಮಕ ಭೂತದ ಕಾಟವನ್ನು ಅನುಭವಿಸಿದ್ದಾಗಿ ವರದಿ ಮಾಡಿದ್ದರು. ಇದೇ ಘಟನೆಯನ್ನು ಆಧರಿಸಿ 2013ರಲ್ಲಿ ‘ದಿ ಕಂಜೂರಿಂಗ್’ ಸಿನಿಮಾ ನಿರ್ಮಿಸಲಾಯಿತು. ಈ ಚಿತ್ರದ ಯಶಸ್ಸಿನ ನಂತರ, ಹಲವು ಸರಣಿ ಚಿತ್ರಗಳು ತೆರೆಕಂಡಿದ್ದು, ಇದರ ಕೊನೆಯ ಭಾಗವಾದ ‘ದಿ ಕಂಜೂರಿಂಗ್: ಲಾಸ್ಟ್ ರೈಟ್ಸ್’ ಕಳೆದ ವಾರವಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಹರಾಜಿಗೆ ಕಾರಣವೇನು?
ಈ 8.5 ಎಕರೆ ಎಸ್ಟೇಟ್ ಅನ್ನು 2022ರಲ್ಲಿ ಜಾಕ್ವೆಲಿನ್ ನುನೆಜ್ ಎಂಬುವವರು 1.5 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ನಂತರ ಅವರು ಈ ಮನೆಯನ್ನು ಪ್ಯಾರಾನಾರ್ಮಲ್ ಪ್ರವಾಸೋದ್ಯಮ ವ್ಯವಹಾರವಾಗಿ ಪರಿವರ್ತಿಸಿ, ರಾತ್ರಿ ತಂಗುವಿಕೆ ಮತ್ತು ದೆವ್ವದ ಪ್ರವಾಸಗಳನ್ನು ಆಯೋಜಿಸುತ್ತಿದ್ದರು.
ಆದರೆ, ಈ ವ್ಯವಹಾರವು ಹಲವಾರು ಸವಾಲುಗಳನ್ನು ಎದುರಿಸಿತು. 2023ರಲ್ಲಿ, ನುನೆಜ್ ಅವರು ತಮ್ಮ ಆಸ್ತಿ ವ್ಯವಸ್ಥಾಪಕರ ವಿರುದ್ಧ ಕಳ್ಳತನದ ಆರೋಪ ಮಾಡಿದ್ದರು. ಆತ್ಮವೊಂದು ಬಂದು ನನಗೆ ಈ ವಿಷಯ ತಿಳಿಸಿದೆ ಎಂದು ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ನಂತರ, ಪಟ್ಟಣದ ಅಧಿಕಾರಿಗಳು ಸುರಕ್ಷತಾ ಕಾಳಜಿ ಮತ್ತು ದಾಖಲೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಅವರ ಮನರಂಜನಾ ಪರವಾನಗಿಯನ್ನು ರದ್ದುಗೊಳಿಸಿದರು. ಆದರೂ, ನುನೆಜ್ ಪ್ಯಾರಾನಾರ್ಮಲ್ ಪ್ರವಾಸಗಳನ್ನು ಮುಂದುವರಿಸಿದ್ದರಿಂದ, ರದ್ದಾದ ಕಾರ್ಯಕ್ರಮಗಳಿಗೆ ಹಣ ಹಿಂದಿರುಗಿಸಲಿಲ್ಲವೆಂದು ಅತಿಥಿಗಳು ದೂರು ನೀಡಿದ್ದರು. ಅಂತಿಮವಾಗಿ, ಆರ್ಥಿಕ ಸಂಕಷ್ಟದಿಂದ ವ್ಯವಹಾರವು ಕುಸಿದುಬಿತ್ತು ಮತ್ತು ಸಾಲ ಮರುಪಾವತಿಸದ ಕಾರಣ ಹ್ಯಾಲೋವೀನ್ ದಿನದಂದು ಇದರ ಹರಾಜಿಗೆ ನಿಗದಿಪಡಿಸಲಾಗಿದೆ.
ಖರೀದಿದಾರರ ಪಟ್ಟಿಯಲ್ಲಿ ಯೂಟ್ಯೂಬರ್‌ಗಳು
ಹಾಸ್ಯನಟ ಮ್ಯಾಟ್ ರೈಫ್ ಮತ್ತು ಯೂಟ್ಯೂಬರ್ ಎಲ್ಟನ್ ಕ್ಯಾಸ್ಟೀ ‘ದಿ ಕಂಜೂರಿಂಗ್’ ಮನೆಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಇವರಿಬ್ಬರೂ ಈಗಾಗಲೇ ‘ದಿ ಕಂಜೂರಿಂಗ್’ ಚಿತ್ರದ ಕೇಂದ್ರಬಿಂದುವಾಗಿದ್ದ ಪ್ಯಾರಾನಾರ್ಮಲ್ ಇನ್‌ವೆಸ್ಟಿಗೇಟರ್‌ಗಳಾದ ಎಡ್ ಮತ್ತು ಲೊರೇನ್ ವಾರೆನ್‌ಗೆ ಸಂಬಂಧಿಸಿದ ಮತ್ತೊಂದು ಭೂತದ ಮನೆಯನ್ನು ಹೊಂದಿದ್ದಾರೆ.