ರಾಯಚೂರು: ಅಧಿಕಾರಿಗಳ ಯಡವಟ್ಟಿನಿಂದಾಗಿ ವೃದ್ಧರ ಪಿಂಚಣಿ ಹಣ ಬೇರೆಯವರಿಗೆ ವರ್ಗಾವಣೆಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಪತಿ ಕರಿಯಪ್ಪ, ಪತ್ನಿ ಬಸಮ್ಮ. ಈ ದಂಪತಿಗೆ ಸುಮಾರು 80 ವರ್ಷ. ಹೀಗಾಗಿ ಈ ದಂಪತಿಗೆ ಪ್ರತಿ ತಿಂಗಳು 1200 ವೃದ್ಧಾಪ್ಯ ಪಿಂಚಣಿ ಬರುತ್ತಿತ್ತು. ಈ ಹಣವೇ ಈ ದಂಪತಿಗೆ ಆಸರೆಯಾಗಿತ್ತು. ಆದರೆ, ಇತ್ತೀಚೆಗೆ ಹಣ ಬರುತ್ತಿರಲಿಲ್ಲ. ಹೀಗಾಗಿ ದಂಪತಿ ಕಣ್ಣೀರು ಸುರಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಇದೇ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ತಿಂಗಳ ಪಿಂಚಣಿ ಬಾರದ ಹಿನ್ನೆಲೆ ಕಚೇರಿಗಳಿಂದ ಕಚೇರಿಗೆ ಹೋಗಿ ಕೇಳಿದ್ದಾರೆ. ಆದರೆ, ಕಚೇರಿ ಕಂಪ್ಯೂಟರ್ ಆಪರೇಟರ್ ಯಡವಟ್ಟು ಬೆಳಕಿಗೆ ಬಂದಿದೆ. ಬಸಮ್ಮಳ ಆಧಾರ್ ಕಾರ್ಡ್ ದಾಖಲೆ, ಹೆಸರಿನ ಪಿಂಚಣಿ ಖಾತೆಗೆ ಅದೇ ಕವಿತಾಳ ಗ್ರಾಮದ ಬಸಮ್ಮ ಎಂಬ ಮತ್ತೊಬ್ಬ ಮಹಿಳೆಯ ಅಕೌಂಟ್ ಖಾತೆ ಲಿಂಕ್ ಮಾಡಲಾಗಿದೆ. ಕಂಪ್ಯೂಟರ್ ಆಪರೇಟರ್ ಒಬ್ಬರು ಮಾಡಿದ ಎಡವಟ್ಟಿಗೆ ವೃದ್ಧ ಬಸಮ್ಮಗೆ ಬರಬೇಕಿದ್ದ ಪಿಂಚಣಿ ಹಣ ಇಬ್ನೊಬ್ಬ ಬಸಮ್ಮಳ ಖಾತೆಗೆ ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.