ಬೆಂಗಳೂರು: ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿಯೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಸತ್ಯ ಎನಿಸುತ್ತಿದೆ. ಸಾರಿಗೆ ಸಂಸ್ಥೆಯ ನೌಕರಸ್ಥರಿಗೆ ಸಮವಸ್ತ್ರ ಕೊಡಿಸುವುದಕ್ಕೂ ಇಲಾಖೆಯಲ್ಲಿ ದುಡ್ಡಿಲ್ಲ ಎನ್ನುವುದು ಇದಕ್ಕೆ ಸಾಕ್ಷಿಯಾಗುತ್ತಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆಯಿಂದ ರಾಜ್ಯದ ಸಾರಿಗೆ ನಿಗಮಗಳು ಪುನಃಶ್ಚೇತನ ಕಂಡಿವೆ ಎಂದು ಹೇಳುತ್ತಿದ್ದರು. ಆದರೆ, ಈಗ ಸಾರಿಗೆ ಬೊಕ್ಕಸ ಖಾಲಿಯಾಗಿದೆ ಎಂಬ ಸತ್ಯ ಹೊರ ಬಿದ್ದಿದೆ. ಕೆಎಸ್ ಆರ್ ಟಿಸಿ ನಿಗಮದ ಸಿಬ್ಬಂದಿಗಳಿಗೆ ಸಮವಸ್ತ್ರ ಕೊಡಿಸಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷ ಬಟ್ಟೆ ನೀಡುತ್ತಿದ್ದ ನಿಗಮವು ಈ ಬಾರಿ ಸಮವಸ್ತ್ರದ ಬದಲು ಚಿಲ್ಲರೆ ಹಣ ಕೊಟ್ಟು ಕೈ ತೊಳೆದುಕೊಂಡಿದೆ. 2 ಶರ್ಟ್ ಪೀಸ್ ಹಾಗೂ 2 ಪ್ಯಾಂಟ್ ಪೀಸ್ ಗೆ ಕೆಎಸ್ ಆರ್ ಟಿಸಿ ಫಿಕ್ಸ್ ಮಾಡಿರುವ ಹಣ 750 ರೂಪಾಯಿ. ಇಷ್ಟರಲ್ಲಿ ಎರಡೆರಡು ಜೊತೆ ಬಟ್ಟೆ ಬರುತ್ತವೆಯಾ? ಎಂಬುವುದೇ ಈಗ ಪ್ರಶ್ನೆ.
ಮಹಿಳಾ ಸಿಬ್ಬಂದಿಗಳ ಸೀರೆಗೆ ರವಿಕೆಗೂ ಕೆಎಸ್‌ಆರ್‌ಟಿಸಿ ಬೆಲೆ ಕಟ್ಟಿದೆ. ಮಹಿಳಾ ಸಿಬ್ಬಂದಿ ಸೀರೆ ಮತ್ತು ರವಿಕೆಗೆ ತಲಾ 1,707 ರೂಪಾಯಿ ನಿಗದಿ ಮಾಡಿದೆ. ಅದರೊಂದಿಗೆ ಇವುಗಳನ್ನು ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳಲು ಕೂಡ ಕೆಎಸ್ ಆರ್ ಟಿಸಿ ದರ ನಿಗದಿ ಮಾಡಿದೆ.
ಪ್ರತಿ ವರ್ಷ ಸಿಬ್ಬಂದಿಗಳಿಗೆ ಕೆಎಸ್ ಆರ್ ಟಿಸಿಯೇ ಸಮವಸ್ತ್ರ ನೀಡುತ್ತಿತ್ತು. ಆದರೆ, ಈಗ ಗ್ಯಾರಂಟಿಯ ಮುಂದೆ ಎಲ್ಲ ನಿಯಮಗಳು ಬದಲಾಗಿವೆ. ಸಿಬ್ಬಂದಿಗಳಿಗೆ ನಿಗಮದಿಂದ ಸಮವಸ್ತ್ರ ನೀಡಲ್ಲ ಎಂದು ಆದೇಶ ಹೊರಡಿಸಲಾಗಿದೆ. ಸಮವಸ್ತ್ರದ ಬದಲಾಗಿ ಬಟ್ಟೆ ಮತ್ತು ಹೊಲಿಗೆ ವೆಚ್ಚಕ್ಕೆ ಕೆಎಸ್ ಆರ್ ಟಿಸಿ ಲೆಕ್ಕಪತ್ರ ಇಲಾಖೆ ಹಣ ನೀಡಲು ಮುಂದಾಗಿದೆ.
ಸಂಸ್ಥೆ ನೀಡುವ ಹಣದಿಂದ ಬಟ್ಟೆ ಖರೀದಿಸಿ ಹೊಲಿಗೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ನಿಗಮದ ಹೊಸ ಹೊಸ ಆಲೋಚೆಗೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಖಾಕಿ ಸೂಟ್ ಧರಿಸುವ ಸಿಬ್ಬಂದಿಗೆ 5.6 ಮೀಟರ್ ಬಟ್ಟೆಗೆ ದರ ನಿಗದಿ ಮಾಡಲಾಗಿದೆ. 2 ಪ್ಯಾಂಟ್ ಹಾಗೂ 2 ಶರ್ಟ್ ಪೀಸ್ ಗೆ 742 ರೂಪಾಯಿ ನಿಗದಿ ಮಾಡಲಾಗಿದೆ. ನೀಲಿ ಸೂಟ್ ಧರಿಸುವ ಸಿಬ್ಬದಿಗೆ 750 ರೂಪಾಯಿ ಹಾಗೂ ಬಿಳಿ ಸೂಟ್ ಧರಿಸುವ ಸಿಬ್ಬಂದಿಗೆ 731 ರೂಪಾಯಿ ನಿಗದಿ ಪಡಿಸಲಾಗಿದೆ. ಮಹಿಳಾ ಸಿಬ್ಬಂದಿ ಹೊಲಿಗೆಗೆ 100 ರೂ. ನಿಗದಿ ಮಾಡಿದ್ದರೆ, ಪುರುಷರ 2 ಸೆಟ್ ಬಟ್ಟೆಗೆ 350 ರೂ.ಪಾಯಿ ಫಿಕ್ಸ್ ಮಾಡಿದೆ.