ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಕರ್ತೃ ಪುರುಷರಾದ ನಿರ್ವಿಕಲ್ಪ ಸಮಾಧಿಸ್ಥರಾದ ಮಹಾತಪಸ್ವಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ ಬುಧವಾರ ಭಕ್ತಸಾಗರದ ನಿರಂತರ ಜಯಘೋಷದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವವನ್ನು ಉದ್ಘಾಟಿಸಿದರು. ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು, ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸತ್ತಿಗೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ಹಲವಾರು ಮಠಾಧೀಶರು ಇದ್ದರು.
ಈ ಬಾರಿ ರಥವನ್ನು ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹೆಜ್ಜೆಮೇಳ, ಕರಡಿಮಜಲು, ಡೊಳ್ಳು, ಜಗ್ಗಲಿಗೆ, ಝಾಂಜ್, ಸಂಬಾಳ ಸೇರಿ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಆರಂಭಗೊಂಡ ರಥೋತ್ಸವವು ಪಂಚಗೃಹ ಹಿರೇಮಠದಿಂದ ಹೊರಟು ಇಸ್ಲಾಂ ಧರ್ಮೀಯರ ಪ್ರಾರ್ಥನಾ ಮಂದಿರ, ಅಮ್ಮಿನಬಾವಿ ಮುಖ್ಯ ಪೇಟೆ ರಸ್ತೆಯಲ್ಲಿ ಸಂಚರಿಸಿ ಕರಡಿಗುಡ್ಡ ರಸ್ತೆಗೆ ಹೊಂದಿಕೊಂಡಿರುವ ಈಶ್ವರ ದೇವಾಲಯದವರೆಗೆ ಹೋಗಿ ಮರಳಿ ಅದೇ ಮಾರ್ಗವಾಗಿ ಸಂಸ್ಥಾನ ಪಂಚಗೃಹ ಹಿರೇಮಠವನ್ನು ತಲುಪಿತು.
ಪುಷ್ಪವೃಷ್ಟಿ : ದಾರಿಯುದ್ದಕ್ಕೂ ಭಕ್ತರು ಅಲಂಕೃತ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಣೆ ಮಾಡುವುದು ಸಾಮಾನ್ಯವಾಗಿತ್ತು. ಜೊತೆಗೆ ಜನರು ತಮ್ಮ ಮನೆಯ ಮೇಲೆ ಹತ್ತಿ ಜಯಘೋಷ ಮೊಳಗಿಸುವುದರೊಂದಿಗೆ ಪುಷ್ಪವೃಷ್ಟಿ ಮಾಡಿದರು.
ಹುಬ್ಬಳ್ಳಿ-ಧಾರವಾಡ, ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹಲವಾರು ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತಸ್ತೋಮ ಈ ರಥೋತ್ಸವದಲ್ಲಿ ಪಾಲ್ಗೊಂಡು ಶಾಂತಪ್ಪಜ್ಜನ ಸಂಭ್ರಮದ ರಥೋತ್ಸವಕ್ಕೆ ಸಾಕ್ಷಿಯಾದರು.
ಫೋಟೋ ವಿವರ :
ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಪುರುಷರಾದ ಮಹಾತಪಸ್ವಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ ಬುಧವಾರ ಭಕ್ತಸಾಗರದ ಮಧ್ಯೆ ಯಶಸ್ವಿಯಾಗಿ ಜರುಗಿತು.