ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಹೆಚ್ಚು ಸಾಲ ಮಾಡಿದೆ. ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಪ್ರತಿಪಕ್ಷಗಳು, ಜನರು ಟೀಕಿಸುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಎಂಟು ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
2025-26ನೇ ಸಾಲಿನ ಹಣಕಾಸು ವರ್ಷದಲ್ಲಿಕೇಂದ್ರ ಸರ್ಕಾರವು ಒಟ್ಟು 14.82 ಲಕ್ಷ ಕೋಟಿ ರೂ. ಸಾಲ ಮಾಡುವ ಉದ್ದೇಶ ಹೊಂದಿದೆ. ಇದರ ಭಾಗವಾಗಿ, ಮೊದಲ ಅರ್ಧ ವರ್ಷಕ್ಕಾಗಿ ಬಾಂಡ್ ಮಾರುಕಟ್ಟೆಯಿಂದ 8 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ. ಒಟ್ಟು ಸಾಲದ ಉದ್ದೇಶದಲ್ಲಿ ಶೇ.54ರಷ್ಟು ಸಾಲವನ್ನು ಆರು ತಿಂಗಳಲ್ಲಿ ಮಾಡಲಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರವು ಹಲವು ಮೂಲಗಳಿಂದ ಸಾಲ ಪಡೆಯಲಿದೆ. ಸರ್ಕಾರದ ಸೆಕ್ಯುರಿಟೀಸ್ ನಲ್ಲಿರುವ 3, 5, 7, 10, 15, 30, 40 ಹಾಗೂ 50 ವರ್ಷಗಳಿಂದಲೂ ಇರಿಸಿರುವ ಬಾಂಡ್ ಗಳ ಮೂಲಕ ಸಾಲ ಪಡೆಯಲಾಗುತ್ತದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಟ್ರೆಷರಿ ಬಿಲ್ಸ್ ಮೂಲಕ 19 ಸಾವಿರ ಕೋಟಿ ರೂ. ಸಾಲ ಪಡೆಯಲಿದೆ. 10 ಸಾವಿರ ಕೋಟಿ ರೂಪಾಯಿಯನ್ನು ಸಾವರಿನ್ ಗ್ರೀನ್ ಬಾಂಡ್ಗಳ ಮೂಲಕವೇ ಪಡೆಯಲಿದೆ.
ಕೇಂದ್ರ ಸರ್ಕಾರವು 2024-25ರಲ್ಲಿಒಟ್ಟು 14.01 ಕೋಟಿ ರೂ. ಸಾಲ ಮಾಡಿತ್ತು. ಇದರಲ್ಲಿ ಬಾಂಡ್ ಮಾರುಕಟ್ಟೆಯಿಂದಲೇ 11.63 ಲಕ್ಷ ಕೋಟಿ ರೂ. ಸಾಲ ಪಡೆದಿತ್ತು. ಕೇಂದ್ರವು ಹೆಚ್ಚು ಸಾಲ ಪಡೆದರೆ, ಅದು ಆರ್ಥಿಕತೆಯಲ್ಲಿ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಕೇಂದ್ರವು ಸಾರ್ವಜನಿಕ ವೆಚ್ಚ, ಮೂಲ ಸೌಕರ್ಯ ಯೋಜನೆಗಳು ಸೇರಿ ಹಲವು ಅತ್ಯವಶ್ಯಕ ಸೇವೆಗಳಿಗಾಗ ಬಾಂಡ್ ಗಳು ಹಾಗೂ ಟ್ರೆಷರಿ ಮೂಲಕವೇ ಹಣ ಸಂಗ್ರಹಿಸುತ್ತದೆ. ಅಂದಹಾಗೆ, ಕರ್ನಾಟಕದ ಸಾಲವು 7 ಲಕ್ಷ ಕೋಟಿ ರೂ.ಗಿಂತ ಜಾಸ್ತಿ ಇದೆ.