ನವದೆಹಲಿ: ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪಿಂಚಣಿ ನಿಯಮಗಳಲ್ಲಿಮಹತ್ವದ ಬದಲಾವಣೆ ಮಾಡಿದೆ. ಶೀಘ್ರದಲ್ಲಿಅಥವಾ ಮುಂದಿನ ದಿನಗಳಲ್ಲಿನಿವೃತ್ತರಾಗುವ ಕೇಂದ್ರ ಸರ್ಕಾರಿ ನೌಕರರು ಪಿಂಚಣಿಗಾಗಿ ಆನ್ಲೈನ್ ಮೂಲಕ ಮಾತ್ರ ಫಾರ್ಮ್ 6-ಎ ಸಲ್ಲಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಇದುವರೆಗೆ ಭೌತಿಕ ಅರ್ಜಿಯನ್ನು ನೌಕರರು ಭರ್ತಿ ಮಾಡಿಕೊಡಬೇಕಿತ್ತು. ಆದರೀಗ, ನಿವೃತ್ತರಾಗುವ ಕೇಂದ್ರ ಸರ್ಕಾರಿ ನೌಕರರು ಭವಿಷ್ಯ ಅಥವಾ ಇ-ಎಚ್ ಆರ್ ಎಂಎಸ್ ಪ್ಲಾಟ್ ಫಾರ್ಮ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ನೌಕರರು ಆನ್ ಲೈನ್ ನಲ್ಲಿಸುಲಭವಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲೈಸ್ ಮಾಡುವ ದೃಷ್ಟಿಯಿಂದ ಕೇಂದ್ರ ಸರಕಾರವೀಗ ಪಿಂಚಣಿ ಅರ್ಜಿಯನ್ನೂ ಆನ್ ಲೈನ್ ಮೂಲಕ ಸಲ್ಲಿಸಲು ಸೂಚಿಸಿದೆ ಎಂದು ತಿಳಿದುಬಂದಿದೆ. ನವೆಂಬರ್ 6ರಿಂದಲೇ ಆನ್ ಲೈನ್ ಮೂಲಕ ಪಿಂಚಣಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರಕ್ರಿಯೆಯ ಸಮರ್ಪಕ ಜಾರಿಗಾಗಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.