ನವದೆಹಲಿ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಹೇರಿದ್ದ ಶೇ.20ರಷ್ಟು ಸುಂಕವನ್ನು ಕಡಿತಗೊಳಿಸಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಕಳೆದ ಒಂದೂವರೆ ವರ್ಷದಿಂದ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಸುಂಕ ಹೇರಿತ್ತು. ಇದನ್ನು ಈಗ ರದ್ದುಗೊಳಿಸಲಾಗಿದೆ. ಇದರಿಂದ ಈರುಳ್ಳಿ ಬೆಳೆಗಾರರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. “ಬೆಳೆಗಾರರಿಗೆ ಅನುಕೂಲವಾಗುವ ಜತೆಗೆ ಗ್ರಾಹಕರಿಗೂ ಹೊರೆಯಾಗದಂತೆ ಬೆಲೆಯನ್ನು ನಿಯಂತ್ರಿಸಲು ರಫ್ತು ಸುಂಕ ರದ್ದುಗೊಳಿಸಲಾಗಿದೆ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರೈತರಿಗೆ ಹೇಗೆ ಅನುಕೂಲ?
ಕೇಂದ್ರ ಸರ್ಕಾರವು ರಫ್ತು ಸುಂಕವನ್ನು ರದ್ದುಗೊಳಿಸಿರುವ ಕಾರಣ ರೈತರು ತಾವು ಬೆಳೆದ ಈರುಳ್ಳಿಯನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯಬಹುದಾಗಿದೆ. ವ್ಯಾಪಾರಿಗಳು ಕೂಡ ಹೆಚ್ಚಿನ ರಫ್ತು ಮಾಡಲು ಇದರಿಂದ ಅನುಕೂಲವಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಒಳ್ಳೆಯ ಬೆಲೆ ಸಿಗುವ ಜತೆಗೆ ಸುಂಕವೂ ರದ್ದಾಗಿರುವ ಕಾರಣ ರೈತರು ಹಾಗೂ ಬೆಳೆಗಾರರಿಗೆ ಅನುಕೂಲವಾಗಲಿದೆ.
ರಫ್ತು ಸುಂಕವು ಶೂನ್ಯಕ್ಕೆ ಇಳಿಕೆಯಾಗಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಈರುಳ್ಳಿ ಬೆಲೆ ಸ್ಥಿರವಾಗಿರಲಿದೆ. ಇದರಿಂದ ಗ್ರಾಹಕರಿಗೂ ಹೆಚ್ಚಿನ ಹೊರೆಯಾಗುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಹಾಗಾಗಿ, ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ಸುಂಕ ಈಗ ರದ್ದಾಗಿರುವುದು ಹಲವು ರೀತಿಯಲ್ಲಿ ಅನುಕೂಲವಾಗಲಿದೆ.
ರಫ್ತು ಸುಂಕ ಇದ್ದಾಗಲೂ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ರಫ್ತು ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ 18ರ ವೇಳೆಗೆ 11.7 ಲಕ್ಷ ಟನ್ ಈರುಳ್ಳಿ ರಫ್ತು ಮಾಡಲಾಗಿದೆ. ಈಗ ಸುಂಕವೂ ರದ್ದಾಗಿರುವ ಕಾರಣ ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಕಳೆದ ಒಂದು ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಶೇ.10ರಷ್ಟು ಕುಂಠಿತವಾಗಿದೆ.