ಮಂಗಳೂರು: ಇಲ್ಲಿಯ ಉಚ್ಚಿಲದ ರೆಸಾರ್ಟ್‌ನ (Resort) ಈಜುಕೊಳದಲ್ಲಿ (Swimming Pool) ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರೆಸಾರ್ಟ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.
ರೆಸಾರ್ಟ್ ನಲ್ಲಿ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ರೆಸಾರ್ಟ್‌ನ ಪರ್ಮಿಶನ್ ಅನ್ನು ತಾತ್ಕಾಲಿಕವಾಗಿ ರದ್ದುಮಾಡಲಾಗಿದೆ. ರೆಸಾರ್ಟ್ ನಲ್ಲಿ ನ್ಯೂನ್ಯತೆಗಳು ಇರುವ ಹಿನ್ನೆಲೆಯಲ್ಲಿ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್ ಡೌನ್ ಆಗಿರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ದುರಂತದಲ್ಲಿ ಮೂವರು ಯುವತಿಯರು ಸಾವನ್ನಪ್ಪಿದ್ದು, ಮೃತಪಟ್ಟವರನ್ನು ಮೈಸೂರು ಕುರುಬರಹಳ್ಳಿಯ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್ (21) ಎಂದು ಗುರುತಿಸಲಾಗಿದೆ.
ಮೂವರು ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದರು. ಬೆಳಗ್ಗೆ ಹೊರವಲಯದ ಬೀಚ್ ಬಳಿ ಬಂದವರು ರೆಸಾರ್ಟ್ ಗೆ ಬಂದು ರೂಂ ಬುಕ್ ಮಾಡಿದ್ದಾರೆ. ತದನಂತರ ಆಟವಾಡಲು ಸ್ವಿಮ್ಮಿಂಗ್ ಪೂಲ್‌ಗೆ ಇಳಿದ್ದಾರೆ. ಕೊಳದ ಒಂದು ಕಡೆ 6 ಅಡಿ ನೀರು ಇರುವುದರಿಂದ ಗಮನಿಸದೆ ಯುವತಿಯೊಬ್ಬರು ಅಲ್ಲಿಗೆ ಹೋಗಿ ಮುಳುಗಿದ್ದಾರೆ. ಕೂಡಲೇ ಇನ್ನುಳಿದವರು ರಕ್ಷಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವಿಷಯವಾಗಿ ಮಾತನಾಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಮೂವರಿಗೆ ಈಜು ಬರುತ್ತಿರಲಿಲ್ಲ. ಹೀಗಾಗಿ ಸಾವು ಸಂಭವಿಸಿದೆ. ಮೂವರು ಮೈಸೂರು ಮೂಲದವರು. ಇವರು ಇಂಜಿನಿಯರಿಂಗ್ ಪೈನಲ್ ಇಯರ್ ಸ್ಟೂಡೆಂಟ್ಸ್.
ರೆಸಾರ್ಟ್‌ನಲ್ಲಿ ಲೈಫ್ ಗಾರ್ಡ್ ಯಾರು ಇರಲಿಲ್ಲ. ಆಳದ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಯುವತಿಯರು ಬೊಬ್ಬೆ ಹೊಡೆದು ಕೂಗಾಡಿದರು ಯಾರು ರಕ್ಷಣೆಗೆ ಬಂದಿಲ್ಲ. ಹೀಗಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.