ಬಸವ ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಅಂತ್ಯ ಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾಗಿದೆ. ಮಂಠಾಳ ಗ್ರಾಮದ ಅಂಬಯ್ಯ ಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿತ್ತು. ಹೀಗಾಗಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು.
ಆದರೆ, ಮರುದಿನ ಬೆಳಗ್ಗೆ ಸಮಾಧಿ ಬಳಿ ಸಂಬಂಧಿಕರು ಬಂದು ನೋಡಿದಾಗ, ಯಾರೋ ಸಮಾಧಿ ಅಗೆದು ಮಗುವರನ್ನು ಹೊರ ತೆಗೆದು, ಒಂದು ಕಪ್ಪು ಬಟ್ಟೆಯನ್ನು ಜೋಳಿಗೆ ರೀತಿ ಗಿಡಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಹಾಕಿದ್ದಾರೆ. ಈ ಕೃತ್ಯವನ್ನು ಕಂಡು ಗ್ರಾಮಸ್ಥರು ಮತ್ತು ಪೋಷಕರು ಆತಂಕಗೊಂಡಿದ್ದಾರೆ. ಮಾಟಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ರೀತಿಯಾಗಿ ಅನೇಕ ಘಟನೆಗಳು ನಡೆದಿದ್ದವು. ಶವಗಳನ್ನು ಸಮಾಧಿಯಿಂದ ಹೊರ ತೆಗೆದು ಪೂಜೆ ಮಾಡಿ, ಶವವನ್ನು ಹಾಗೆ ಬಿಟ್ಟು ಹೋಗಿದ್ದ ಘಟನೆಗಳು ನಡೆದಿದ್ದವು. ಹೀಗಾಗಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
