ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸೇನೆಯ ಆಡಳಿತದಿಂದ ದೇಶವನ್ನು ರಕ್ಷಿಸಿದ್ದ ನಾಯಕಿಯೇ ಈಗ ಜೀವ ಉಳಿಸಿಕೊಳ್ಳುವುದಕ್ಕಾಗಿ ಅದೇ ನೆಲದಿಂದ ಓಡಿ ಹೋಗಿದ್ದಾರೆ!
ಶೇಖ್ ಹಸೀನಾ ಎಂಬ ದಿಟ್ಟ ನಾಯಕಿಯೇ ಈಗ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೀವ ಉಳಿಸಿಕೊಳ್ಳುವುದಕ್ಕಾಗಿ ಪರಾರಿಯಾಗಿದ್ದಾರೆ. ಈ ಮೂಲಕ ಮತ್ತೆ ಅಲ್ಲಿ ಸೇನಾ ಆಡಳಿತ ನೆಲೆಯೂರುವಂತಾಗಿದೆ.
ನಾಗರಿಕ ಸೇವೆಗಳ ಉದ್ಯೋಗ ಕೋಟಾ ವಿರೋಧಿಸಿ ಬಾಂಗ್ಲಾದಲ್ಲಿ ವಿದ್ಯಾರ್ಥಿಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ರಾಜಕೀಯ ಹಿತಾಸಕ್ತಿ, ಹಸ್ತಕ್ಷೇಪ ಬೆರೆತು ಅದು ಹಿಂಸಾರೂಪಕ್ಕೆ ತಿರುಗುವಂತಾಯಿತು. ಪರಿಣಾಮ 300ಕ್ಕೂ ಅಧಿಕ ಜನರನ್ನು ಈ ಹಿಂಸೆ ಬಲಿ ಪಡೆಯಿತು. ಆದರೆ, ಈ ಪ್ರತಿಭಟನೆ ಹಾಗೂ ಹಿಂಸಾಚಾರದ ಮೂಲಕ ಬರೋಬ್ಬರಿ ಸತತ 15 ವರ್ಷಗಳ ಆಡಳಿತದಲ್ಲಿ ಶೇಖ್ ಹಸೀನಾ ಅತ್ಯಂತ ಕೆಟ್ಟ ಸನ್ನಿವೇಶ ಹಾಗೂ ಪರಿಸ್ಥಿತಿ ಎದುರಿಸುವಂತಾಗಿತ್ತು. ಆದರೆ, ಅದು ರಾಜೀನಾಮೆಯಲ್ಲಿ ಕೊನೆಯಾಯಿತು. ಅಷ್ಟೇ ಅಲ್ಲ, ಜೀವಕ್ಕೂ ಕುತ್ತು ಬಂದು, 15 ವರ್ಷಗಳಿಂದ ಅಧಿಕಾರದಲ್ಲಿದ್ದ ಹಾಗೂ ಇಡೀ ಸತತವಾಗಿ 15 ವರ್ಷಗಳಿಂದ ಜನರ ಮನ ಗೆಲ್ಲುತ್ತ, ಜನರ ಬದುಕು ಅರಳಿಸಿದ್ದ ದಿಟ್ಟ ನಾಯಕಿ ತನ್ನ ಜೀವದ ರಕ್ಷಣೆಗಾಗಿಯೇ ಬೇರೊಂದು ದೇಶಕ್ಕೆ ಪಲಾಯನ ಮಾಡುವಂತಾಯಿತು. ನೆನಪಿರಲಿ ಹಸೀನಾ ಶೇಖ್ ಅಧಿಕಾರಕ್ಕೆ ಬಂದ ಮೇಲೆ ಬಾಂಗ್ಲಾ ದೇಶದ ನಾಗರಿಕರ ತಲಾ ಆದಾಯ ಭಾರತೀಯರ ತಲಾ ಆದಾಯಕ್ಕಿಂತ ಹೆಚ್ಚಾಗಿದೆ.
ಈ ಪ್ರತಿಭಟನೆ ಆರಂಭವಾಗಿದ್ದು ಶಾಂತಿಯ ಸಂದೇಶದ ಚಿಮಣಿಯನ್ನು ಕೈಯಲ್ಲಿ ಹಿಡಿದು. ಆದರೆ, ಯಾವಾಗ ಪೊಲೀಸರು ಹಾಗೂ ಸರ್ಕಾರದ ಪರ ನಿಂತು ವಿದ್ಯಾರ್ಥಿಗಳು, ಪ್ರತಿಭಟನಾನಿರತರ ಮೇಲೆ ದಾಳಿ ನಡೆಸಿದರೋ, ಅದರ ಬಳಿಕ ಸಂಪೂರ್ಣ ಸ್ವರೂಪವೇ ಬದಲಾಯಿತು. ಬೀದಿ ಬೀದಿಗಳಲ್ಲಿ ಹಿಂಸಾಚಾರಗಳು ನಡೆದವು. ಮೀಸಲಾತಿ ಪ್ರಮಾಣವನ್ನು ಶೇ 5ಕ್ಕೆ ಇಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬಳಿಕವೂ ಅವರ ಆಕ್ರೋಶ ಹಾಗೆಯೇ ಉಳಿದಿತ್ತು.
ಇತ್ತೀಚೆಗಷ್ಟೇ ಅಂದರೆ, ಜನವರಿ ತಿಂಗಳಲ್ಲಿ 76 ವರ್ಷದ ಹಸೀನಾ ಬರೋಬ್ಬರಿ 5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೇನು ಜನರನ್ನು ಹೆದರಿಸಿ ಮಿಲಿಟರಿ ಅಧಿಕಾರದಿಂದ ಪ್ರಧಾನಿಯಾದವರಲ್ಲ. ಜನರ ವಿಶ್ವಾಸ, ಮತಗಳಿಸಿ ಪ್ರಧಾನಿಯಾಗಿದ್ದರು. ಆದರೆ, ಆಯ್ಕೆಯಾದ ಆರೇಳು ತಿಂಗಳಲ್ಲಿ ಅವರ ವಿರುದ್ಧ ವಿದ್ಯಾರ್ಥಿಗಳು ಮುಗಿಬಿದ್ದಿದ್ದರು. ವಿರೋಧ ಪಕ್ಷಗಳು ಕೂಡ ಇದಕ್ಕೆ ಸಾಥ್ ನೀಡಿರುವುದು ಸತ್ಯ.
ಶೇಖ್ ಹಸೀನಾ ಅವರು ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಕ್ರಾಂತಿಕಾರಿ ನಾಯಕ ಹಾಗೂ ಮಾಜಿ ಪ್ರಧಾನಿ ಶೇಖ್ ಮುಜೀಬುರ್ ರೆಹಮಾನ್ ಮಗಳು. 1975ರಲ್ಲಿ ಶೇಖ್ ಹಸೀನಾ ವಿದೇಶ ಪ್ರವಾಸದಲ್ಲಿದ್ದಾಗ ಸೇನಾ ಅಧಿಕಾರಿಗಳು ಅವರ ತಂದೆ ಹಾಗೂ ಪ್ರಧಾನಿ ಶೇಖ್ ಮುಜೀಬುರ್ ರೆಹಮಾನ್ ರನ್ನು ಹತ್ಯೆ ಮಾಡಿದ್ದರು. ಅಲ್ಲದೇ, ಹಸೀನಾ ಅವರ ತಾಯಿ, ಮೂವರು ಸಹೋದರರು ಕೂಡ ದಂಗೆಯಲ್ಲಿ ಬಲಿಯಾಗಿದ್ದರು. ಆನಂತರ ಶೇಖ್ ಹಸೀನಾ ಪಶ್ಚಿಮ ಜರ್ಮನಿಯಲ್ಲಿನ ಬಾಂಗ್ಲಾದೇಶಿ ರಾಯಭಾರಿ ನಿವಾಸದಲ್ಲಿ ಆಶ್ರಯ ಪಡೆದರು. ಅವರಿಗೆ ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಆಶ್ರಯದ ಆಹ್ವಾನ ನೀಡಿದ್ದರು. ಆನಂತರ 6 ವರ್ಷಗಳ ಬಳಿಕ ತಾಯ್ನಾಡಿಗೆ ವಾಪಾಸಾದ ಅವರು, ತಮ್ಮ ತಂದೆಯ ನಿಧನದಿಂದ ಸೂಕ್ತ ನಾಯಕರಿಲ್ಲದೆ, ಕಮರುತ್ತಿದ್ದ ಅವಾಮಿ ಲೀಗ್ ಪಕ್ಷದ ನೇತೃತ್ವ ವಹಿಸಿಕೊಂಡರು. ಆಗ ಬದುಕನ್ನೇ ಹೋರಾಟಕ್ಕೆ ಮುಡಿಪಾಗಿಟ್ಟರು. ಆ ವೇಳೆ ಅವರು ಹೆಚ್ಚಿನ ಅವಧಿಯನ್ನು ಗೃಹ ಬಂಧನದಲ್ಲಿಯೇ ಕಳೆದಿದ್ದರು.
ಸೇನಾ ಸರ್ವಾಧಿಕಾರಿ ಹುಸೇನ್ ಮುಹಮ್ಮದ್ ಎರ್ಷಾದ್ ಅವರನ್ನು ಕೆಳಗಿಳಿಸಲು 1990ರಲ್ಲಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಜತೆ (ಬಿಎನ್‌ಪಿ) ಹಸೀನಾ ಕೈ ಜೋಡಿಸಿದರು. ಆದರೆ ಈ ಮೈತ್ರಿ ಜಾಸ್ತಿ ಸಮಯ ಸ್ನೇಹಪರವಾಗಿ ಉಳಿಯಲಿಲ್ಲ. ಆನಂತರ 1996ರಲ್ಲಿ ಶೇಖ್ ಹಸೀನಾ ಪ್ರಧಾನಿಯಾಗಿ ಆಯ್ಕೆಯಾದರು. ಆನಂತರದ ಅವಧಿಗೆ ಖಾಲಿದಾ ಜಿಯಾ ಅಧಿಕಾರಕ್ಕೆ ಏರಿದರು.
ಸೇನಾ ಬೆಂಬಲಿತ ಸರ್ಕಾರದ ದಂಗೆಯೊಂದಿಗೆ 2007ರಲ್ಲಿ ಇಬ್ಬರೂ ಭ್ರಷ್ಟಾಚಾರ ಆರೋಪಗಳಲ್ಲಿ ಜೈಲು ಪಾಲಾಗಿದ್ದರು. ಮುಂದಿನ ವರ್ಷ ಈ ಪ್ರಕರಣಗಳನ್ನು ಕೈಬಿಡಲಾಯಿತು. ಅದರೊಂದಿಗೆ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸ್ವತಂತ್ರರಾದರು. ಭಾರಿ ಬಹುಮತದೊಂದಿಗೆ ಹಸೀನಾ ಗೆದ್ದು ಬೀಗಿದರು. ಹಸೀನಾ ಅವರಿಗೆ ಪ್ರಬಲ ಎದುರಾಳಿಯಾಗಿದ್ದ ಜಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ 2018ರಲ್ಲಿ 18 ವರ್ಷಗಳ ಸೆರವಾಸಕ್ಕೆ ಗುರಿಯಾದರು. 75 ವರ್ಷದ ಜಿಯಾ ಕೂಡ ಈಗ ರಾಜಕೀಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಅವರ ಪಕ್ಷದ ಹಲವಾರು ನಾಯಕರು ಕೂಡ ಈಗ ಜೈಲು ವಾಸದಲ್ಲಿದ್ದಾರೆ. ಆದರೆ, ಈಗ ಮತ್ತೆ ಬಾಂಗ್ಲಾದಲ್ಲಿ ರಾಜಕೀಯ ಕ್ರಾಂತಿಯಾಗಿದೆ. ಕ್ರಾಂತಿಕಾರಿ ನಾಯಕಿ ಪ್ರಾಣಕ್ಕಾಗಿ ದೇಶವನ್ನೇ ಬಿಟ್ಟು ಓಡಿ ಹೋಗಿದ್ದಾರೆ.
1971ರಲ್ಲಿ ಭಾರತದ ಸಹಾಯದ ಮೂಲಕ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ರಚನೆಯಾದ ಬಾಂಗ್ಲಾದೇಶವು ಜಗತ್ತಿನ ಬಡ ದೇಶಗಳಲ್ಲಿ ಒಂದಾಗಿದೆ. ಆದರೆ, 2009ರ ನಂತರ ಹಸೀನಾ ಆಡಳಿತದಲ್ಲಿ ಈ ದೇಶ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವಾರ್ಷಿಕ ಸರಾಸರಿ ಶೇ 6ರ ಪ್ರಗತಿ ಕಂಡಿರುವ ಬಾಂಗ್ಲಾ, 2021ರ ನಂತರ ಭಾರತಕ್ಕಿಂತಲೂ ಅಧಿಕ ತಲಾದಾಯ ಹೊಂದಿದ ಸಾಧನೆ ಮಾಡಿದೆ. ದೇಶದ ಶೇ 95ಕ್ಕೂ ಅಧಿಕ ಜನಸಂಖ್ಯೆಗೆ ಈಗ ವಿದ್ಯುತ್ ಸಂಪರ್ಕ ಸಿಕ್ಕಿದೆ. ಬಡತನ ಮಟ್ಟದಲ್ಲಿಯೂ ಗಣನೀಯ ಇಳಿಕೆ ಕಂಡಿದೆ. ಇದು ಪ್ರಧಾನಿ ಹಸೀನಾ ಶೇಖ್ ಅವರ ಸಾಧನೆ ಎಂದರೆ ತಪ್ಪಾಗಲಾರದು.
2017ರಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ ಸೇನಾ ದಂಗೆಯ ನಂತರ ಅಲ್ಲಿಂದ ಓಡಿ ಬಂದಿದ್ದ ಸಾವಿರಾರು ರೊಹಿಂಗ್ಯಾ ಮುಸ್ಲಿಮರಿಗೆ ಬಾಗಿಲು ತೆರೆದ ಹಸೀನಾ ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಶೇಖ್ ಹಸೀನಾ ಅವರು 1967ರಲ್ಲಿ ಬಂಗಾಳಿ ನ್ಯೂಕ್ಲಿಯರ್ ವಿಜ್ಞಾನಿ ಎಂ.ಎ. ವಾಜೆದ್ ಮಿಯಾಹ್ ಅವರನ್ನು ಮದುವೆಯಾಗಿದ್ದರು. ಅವರಿಗೆ ಸಜೀಬ್ ಮತ್ತು ಸೈಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮಿಯಾಹ್ ಅವರು 2009ರಲ್ಲಿ ನಿಧನರಾಗಿದ್ದರು.
ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡುವುದಾಗಿ ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್ ಈಗ ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಿಂದಾಗಿ ಹಿಂಸಾಚಾರ ನಡೆಯಿತು. ಹೀಗಾಗಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ದೇಶ ಕಳೆದುಕೊಂಡಿದ್ದ ಶಾಂತಿಯನ್ನು ಮರುಸ್ಥಾಪಿಸುತ್ತೇವೆ. ನಾನು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದೇನೆ. ಹಿಂಸೆ ನಿಲ್ಲಿಸುವಂತೆ ನಾಗರಿಕರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಸೇನಾ ಮುಖ್ಯಸ್ಥ ಹೇಳಿದ್ದಾರೆ. ಅಲ್ಲದೇ, ಕರ್ಫ್ಯೂ ಇಲ್ಲ, ತುರ್ತು ಪರಿಸ್ಥಿತಿಯೂ ಇಲ್ಲ ಅಂದಿದ್ದಾರೆ. ಶೇಖ್ ಹಸೀನಾ ಪಲಾಯನ ಮಾಡಿದ ಒಂದೇ ದಿನದಲ್ಲಿ ಅಲ್ಲಿ ಎಲ್ಲವೂ ಬದಲಾಯಿತೇ? ಬಾಂಗ್ಲಾದಲ್ಲಿ ಮುಂದೇನಾಗಲಿದೆ? ಕಾಯ್ದು ನೋಡಬೇಕಿದೆ.