ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು, ಮುಗಿಯುವ ಹಂತಕ್ಕೆ ಬರುತ್ತಿಲ್ಲ. ಗುರುವಾರ ರಾತ್ರಿ ಬಿಜೆಪಿ ರೆಬೆಲ್ಸ್ ಟೀಂ ಏಕಾಏಕಿ ಸಭೆ ನಡೆಸಿದೆ.
ಬೆಂಗಳೂರಿನಲ್ಲಿ ಈ ಸಭೆ ನಡೆದಿದ್ದು, ಭಿನ್ನರ ಸಭೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಜರಾಗಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇಲ್ಲಿಯವರೆಗೆ ತಟಸ್ಥ ಬಣದಲ್ಲಿದ್ದ ಬೊಮ್ಮಾಯಿ, ಅಶೋಕ್ ಈಗ ಭಿನ್ನರ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಬಿ.ಪಿ.ಹರೀಶ್, ಎನ್.ಆರ್. ಸಂತೋಷ್ ಸೇರಿದಂತೆ ಹಲವರು ಇದ್ದರು. ಈ ಸಭೆಯಲ್ಲಿ ಅಶೋಕ್ ಹಾಗೂ ಬೊಮ್ಮಾಯಿ ಕಾಣಿಸಿಕೊಂಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿತ್ತು. ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಸದ್ಯದ ಮಾಹಿತಿಯಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.