ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಸಲ್ಲಿಸಿದ್ದ ಜಾಮೀನು (Bail) ಅರ್ಜಿ ವಜಾ ಆಗಿದೆ.
ಹೊಳೆನರಸೀಪುರದಲ್ಲಿ (Holenarasipura) ದಾಖಲಾಗಿದ್ದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ಇಂದು 42 ಎಸಿಎಂಎಂ ಕೋರ್ಟ್ ನಲ್ಲಿ ನಡೆಯಿತು.
27 ವರ್ಷದ ಸಂತ್ರಸ್ತನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣರನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದರು. ಕೋರ್ಟ್ ಸೂರಜ್ ರೇವಣ್ಣಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದ್ದು ಈಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೀಗಾಗಿ ಇನ್ನೂ ಹಲವು ದಿನ ಅವರು ಪರಪ್ಪನ ಅಗ್ರಹಾರದಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಸೂರಜ್ ರೇವಣ್ಣ ತಪ್ಪು ಮಾಡಿದ್ದು ಸಾಬೀತಾದರೆ, ಐಪಿಸಿ 377 (ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ): ಜೀವಾವಧಿ ಅಥವಾ 10 ವರ್ಷಗಳ ಜೈಲು, ಐಪಿಸಿ 342 (ದುರುದ್ದೇಶದಿಂದ ಕೂಡಿ ಹಾಕುವುದು) 1 ವರ್ಷ ಜೈಲು ಅಥವಾ ದಂಡ, ಐಪಿಸಿ 506 (ಕ್ರಿಮಿನಲ್ ಪಿತೂರಿ, ಜೀವ ಬೆದರಿಕೆ) 2 ವರ್ಷ ಜೈಲು ಅಥವಾ ದಂಡದ ಶಿಕ್ಷೆಯನ್ನು ಎದುರಿಸಬಹುದು.