ಬೆಂಗಳೂರು : ವಿಧಾನಸೌಧದಲ್ಲಿ ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿವೆ. ಈ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸ್ವಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿವೆ. ಜೆಡಿಎಸ್ ಕೂಡ ಈ ಹೋರಾಟಕ್ಕೆ ಕೈ ಜೋಡಿಸಿದೆ.
ಆದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ಪೀಕರ್ ನಡುವಳಿಕೆ ಗಮನಿಸಿದರೆ, ಚರ್ಚೆಗೆ ಅವಕಾಶ ಸಿಗುವುದು ಕಡಿಮೆ ಎಂದಿದ್ದಾರೆ.
ಮುಡಾ ಹಗರಣದ ಸಂಪೂರ್ಣ ಸತ್ಯ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ, ಕುಮಾರಸ್ವಾಮಿ ಅವಧಿಯಲ್ಲಿ ತಪ್ಪಾಗಿದ್ದರೂ ಅದು ಕೂಡ ತಪ್ಪೇ ಎಂದು ಪರೋಕ್ಷವಾಗಿ ಮೈತ್ರಿ ಪಕ್ಷದ ಮಾಜಿ ಸಿಎಂಗಳ ಹಗರಣಗಳನ್ನು ಕೆದಕುವಂತೆ ಪರೋಕ್ಷವಾಗಿ ಹೇಳಿದ್ದಾರೆ.
ಯಡಿಯೂರಪ್ಪನವರ ಕಾಲದ ಹಗರಣವೂ ಹೊರಗೆ ಬರಲಿ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೂ ನಿಜಬಣ್ಣ ಗೊತ್ತಾಗಲಿ. ಪೂಜ್ಯ ಅಪ್ಪಾಜಿಯವರು, ಪೂಜ್ಯ ತಂದೆಯವರು ಎಂದು ತಿಳಿದುಕೊಳ್ಳುವವರಿಗೆ ಅಸಲಿ ರೂಪ ಗೊತ್ತಾಗಲಿ. ಇದು ನಡೆಯಬೇಕು, ಅವರೂ ಜೈಲಿಗೆ ಹೋಗಲಿ ಎಂದು ಯತ್ನಾಳ್, ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಮೈಸೂರು ಪಾದಯಾತ್ರೆ ಎನ್ನುವುದು ಬರೀ ನಾಟಕ, ಬರೀ ಆಟ. ಇವರು, ಇವರ ಅಪ್ಪ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿ. ಸಿಎಂ ಮಗನ ದಾಖಲೆಯೂ ಇದೆ. ಎಲ್ಲರೂ ಜೈಲಿಗೆ ಹೋದರೆ ಹೋಗಲಿ, ನ್ಯಾಯ ಕೊಡಿಸುವುದಕ್ಕೆ ನಾನಿದ್ದೇನೆ ಎಂದು ಯತ್ನಾಳ್ ಗುಡುಗಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಉಭಯ ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ತಡರಾತ್ರಿಯ ವರೆಗೆ ಹಾಡು ಹಾಡುತ್ತಾ, ಭಜನೆ ಮಾಡುತ್ತಾ, ಹರಟೆಯಲ್ಲಿ ಕಾಲಕಳೆದರು.