ಮತಗಟ್ಟೆಯ ಬೂತ್ ನ ಶೌಚಾಲಯದಲ್ಲಿ ಏಜೆಂಟ್ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಮುಂಬೈನ ವರ್ಲಿ ಪ್ರದೇಶದಲ್ಲಿನ ಮತಗಟ್ಟೆ ಕೇಂದ್ರದ ಶೌಚಾಲಯದಲ್ಲಿ ಶಿವಸೇನಾ (ಯುಬಿಟಿ) ಮತಗಟ್ಟೆ ಏಜೆಂಟ್ ಶವವಾಗಿ ಪತ್ತೆಯಾಗಿದ್ದಾರೆ. ಮನೋಹರ್ ನಲ್ಗೆ (62) ಈ ರೀತಿ ಪತ್ತೆಯಾದ ವ್ಯಕ್ತಿ. ಸದ್ಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಐದನೇ ಹಂತದ ಲೋಕಸಭೆ ಚುನಾವಣೆಗೆ ಸೋಮವಾರ ರಾಜ್ಯಾದ್ಯಂತ 13 ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ವೇಳೆ ಮನೋಹರ್ ಬೂತ್ ಏಜೆಂಟ್ ಆಗಿ ನೇಮಕಗೊಂಡಿದ್ದರು. ಶೌಚಾಲಯಕ್ಕೆ ಹೋಗುವ ಮೊದಲು ಆಯಾಸದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದರೂ ನಿಖರ ಕಾರಣ ತಿಳಿದು ಬಂದಿಲ್ಲ. ಚುನಾವಣಾ ಆಯೋಗ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಸೇನಾ (ಯುಬಿಟಿ) ಕಾರ್ಯಕರ್ತರು ಆರೋಪಿಸಿದ್ದಾರೆ.