ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯ ಕೃತ್ಯಕ್ಕೆ ಇಡೀ ದೇಶವೇ ಶಾಪ ಹಾಕುತ್ತಿದೆ. ಅಲ್ಲದೇ, ಆತನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗುತ್ತಿದೆ. ಸದ್ಯ ಈಗ ಆತನ ಕರಾಳ ಮುಖಗಳು ಬಯಲಾಗುತ್ತಿವೆ.
ಆರೋಪಿಯು ತನ್ನ ಪತ್ನಿ, ತಂಗಿ, ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದ ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ. ಆತ ಹೆಚ್ಚು ಹೊತ್ತು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಿರುತ್ತಿದ್ದ. ಆತನಿಗೆ ಮೂವರು ಪತ್ನಿಯರಿದ್ದಾರೆ. ಆದರೆ ಯಾವೊಬ್ಬ ಹೆಂಡತಿಯೂ ಆತನೊಂದಿಗೆ ಜೀವನ ಮಾಡುತ್ತಿಲ್ಲ.
ಕೋಲ್ಕತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿ ತನ್ನ ಅಪರಾಧ ಒಪ್ಪಿಕೊಂಡಿದ್ದು, ತನ್ನನ್ನು ಗಲ್ಲಿಗೇರಿಸುವಂತೆ ಕೇಳಿಕೊಂಡಿದ್ದಾನೆ.
ಶುಕ್ರವಾರ ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು.
ವೈದ್ಯೆಯನ್ನು ಹತ್ಯೆಗೈದಿರುವ ಕಟ್ಟಡಕ್ಕೆ ಆತ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಅಲ್ಲದೇ, ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದರು.