– ಭಿಕ್ಷುಕನ ವೇಷದಲ್ಲಿ 6 ವರ್ಷ ಪಾಕಿಸ್ತಾನದಲ್ಲಿ ನೆಲೆಸಿ ಕಹೂಟಾ ಅಣು ಸ್ಥಾವರದ ರಹಸ್ಯ ಭೇದಿಸಿದ್ದ ಭಾರತದ ‘ಸೂಪರ್ ಕಾಪ್’
ನವದೆಹಲಿ: ಹರಿದು ಹೋಗಿರುವ ಶಾಲು, ಧೂಳು ತುಂಬಿದ ಬೀದಿಗಳು… ಇದರ ಮಧ್ಯೆ ಯಾರೂ ಗಮನಿಸದ ಒಬ್ಬ ವ್ಯಕ್ತಿ… ಇದು 1980ರ ದಶಕದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಯಾರ ಗಮನಕ್ಕೂ ಬಾರದೆ ಸಂಚರಿಸುತ್ತಿದ್ದ ಭಾರತದ ಭವಿಷ್ಯದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಅಂದಿನ ಚಿತ್ರಣ.

ಸಾಮಾನ್ಯವಾಗಿ ನೋಡುವವರಿಗೆ ಅವರು ಬೀದಿಗಳಲ್ಲಿ ಅಲೆಯುತ್ತಾ ನಾಣ್ಯಗಳನ್ನು ಸಂಗ್ರಹಿಸುವ ಭಿಕ್ಷುಕನಂತೆ ಕಾಣುತ್ತಿದ್ದರು. ಆದರೆ ಆ ಹರಿದ ಬಟ್ಟೆ ಮತ್ತು ಅವ್ಯವಸ್ಥಿತ ನೋಟದ ಹಿಂದೆ ಅಡಗಿದ್ದು, ದೇಶದ ಭದ್ರತೆಗಾಗಿಯೇ ಮೀಸಲಾದ ತೀಕ್ಷ್ಣ ಮನಸ್ಸು. ಆಗಲೇ ಗುಪ್ತಚರ ದಳ (ಐಬಿ) ಮತ್ತು ಸಿಕ್ಕಿಂ ಕಾರ್ಯಾಚರಣೆಗಳಿಗಾಗಿ ಹೆಸರುವಾಸಿಯಾಗಿದ್ದ ದೋವಲ್ ಅವರ ಉದ್ದೇಶ ಸ್ಪಷ್ಟವಾಗಿತ್ತು: ಪಾಕಿಸ್ತಾನದ ಅತ್ಯಂತ ಸುರಕ್ಷಿತ ಸಂಶೋಧನಾ ವಲಯಗಳಲ್ಲೇ ನುಸುಳಿ, ಅದರ ರಹಸ್ಯ ಅಣ್ವಸ್ತ್ರ ಮಹತ್ವಾಕಾಂಕ್ಷೆಗಳನ್ನು ಬಯಲು ಮಾಡುವುದು.
1974ರಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ನಂತರ, ಪಾಕಿಸ್ತಾನವು ಚೀನಾದಂತಹ ದೇಶಗಳ ಬೆಂಬಲದೊಂದಿಗೆ ಶತಾಯಗತಾಯ ಅಣ್ವಸ್ತ್ರಗಳನ್ನು ಹೊಂದುವ ಪ್ರಯತ್ನದಲ್ಲಿತ್ತು. ಈ ರಹಸ್ಯ ಪ್ರಯತ್ನಗಳ ಬಗ್ಗೆ ಭಾರತಕ್ಕೆ ದೃಢವಾದ ಸಾಕ್ಷ್ಯದ ಅಗತ್ಯವಿತ್ತು. “ಸೂಪರ್ ಕಾಪ್” ಎಂದೇ ಖ್ಯಾತರಾಗಿದ್ದ ದೋವಲ್ ಹೆಗಲಿಗೆ ಈ ಜವಾಬ್ದಾರಿಯನ್ನು ನೀಡಲಾಗಿತ್ತು.
ಕ್ಷೌರದ ಅಂಗಡಿಯಲ್ಲಿ ಸಿಕ್ಕ ಸುಳಿವು
ಇಸ್ಲಾಮಾಬಾದ್‌ನ ಕಹೂಟಾ ಪ್ರದೇಶ, ಕುಖ್ಯಾತ ಖಾನ್ ರಿಸರ್ಚ್ ಲ್ಯಾಬೊರೇಟರೀಸ್ (KRL)ಗೆ ನೆಲೆಯಾಗಿತ್ತು. ಇಲ್ಲಿನ ವಿಜ್ಞಾನಿಗಳು ಮತ್ತು ಭದ್ರತಾ ಸಿಬ್ಬಂದಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ತಿಂಗಳುಗಟ್ಟಲೆ ಅಜಿತ್ ದೋವಲ್ ಅವರು ಭಿಕ್ಷುಕನ ವೇಷದಲ್ಲಿ ಅಲ್ಲಿನ ಬೀದಿಗಳಲ್ಲಿ ಬೆರೆತು, ಎಲ್ಲರ ಚಲನವಲನಗಳನ್ನು, ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿ, ತಮ್ಮ ಮನಸ್ಸಿನಲ್ಲೇ ಗುಪ್ತಚರ ನಕ್ಷೆಯನ್ನು ಸಿದ್ಧಪಡಿಸುತ್ತಿದ್ದರು. ಇದೊಂದು ಅಪಾಯಕಾರಿ ಕೆಲಸವಾಗಿದ್ದರೂ ದೇಶದ ಭದ್ರತೆ ಕುರಿತಾದ ಅವರ ಅಚಲ ಸಂಕಲ್ಪವನ್ನು ಈ ಎಲ್ಲವನ್ನೂ ಮಾಡಿಸಿತ್ತು.
ಅವರ ಕಾರ್ಯಾಚರಣೆಗೆ ಮಹತ್ವದ ತಿರುವು ಸಿಕ್ಕಿದ್ದು, ಕೆಆರ್‌ಎಲ್ ವಿಜ್ಞಾನಿಗಳು ಹೆಚ್ಚಾಗಿ ಬರುತ್ತಿದ್ದ ಒಂದು ಸಣ್ಣ ಕ್ಷೌರದ ಅಂಗಡಿಯಲ್ಲಿ. ಇತರರು ಕಸವೆಂದು ಪರಿಗಣಿಸುತ್ತಿದ್ದ, ನೆಲದ ಮೇಲೆ ಬಿದ್ದಿದ್ದ ಕೂದಲಿನ ಎಳೆಗಳನ್ನು ದೋವಲ್ ಅತ್ಯಂತ ಜಾಗರೂಕತೆಯಿಂದ ಸಂಗ್ರಹಿಸಿದ್ದರು. ಈ ಕೂದಲಿನ ಮಾದರಿಗಳನ್ನು ವಿಶ್ಲೇಷಣೆಗಾಗಿ ಭಾರತಕ್ಕೆ ಕಳುಹಿಸಿದರು. ಪರೀಕ್ಷೆಗಳ ನಂತರ ಭಾರತದ ಭಯ ನಿಜವಾಯಿತು: ಆ ಕೂದಲಿನಲ್ಲಿ ಯುರೇನಿಯಂ ಮತ್ತು ವಿಕಿರಣದ ಅಂಶಗಳು ಪತ್ತೆಯಾಗಿದ್ದವು. ಪಾಕಿಸ್ತಾನವು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ಇದು ನಿರ್ಣಾಯಕ ಸಾಕ್ಷ್ಯವಾಗಿತ್ತು. ಈ ಗುಪ್ತಚರ ಮಾಹಿತಿಯು ಭಾರತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರೂಪಿಸಲು ನೆರವಾಯಿತು.
ಆರು ವರ್ಷಗಳ ಅಪಾಯಕಾರಿ ಜೀವನ
ಈ ಕಾರ್ಯಾಚರಣೆ ಕೇವಲ ಕೆಲ ದಿನಗಳದ್ದಾಗಿರಲಿಲ್ಲ. ಬರೋಬ್ಬರಿ ಆರು ವರ್ಷಗಳ ಕಾಲ ದೋವಲ್ ಅವರು ನಿರಂತರ ಸಾವಿನ ಭೀತಿಯಲ್ಲೇ ಬದುಕಿದ್ದರು. ಅವರು ಸಿಕ್ಕಿಬಿದ್ದಿದ್ದರೆ ಅದು ಕೇವಲ ಅವರ ಜೀವಕ್ಕೆ ಮಾತ್ರವಲ್ಲ, ಭಾರತದ ರಾಷ್ಟ್ರೀಯ ಭದ್ರತೆಗೂ ಅಪಾಯವನ್ನುಂಟುಮಾಡುತ್ತಿತ್ತು. ದೋವಲ್ ಅವರ ಈ ಪ್ರಯತ್ನಗಳಿಂದ ಪಾಕಿಸ್ತಾನದ ಪರಮಾಣು ಪರೀಕ್ಷಾ ಸಾಮರ್ಥ್ಯವು ಸುಮಾರು ಹದಿನೈದು ವರ್ಷಗಳಷ್ಟು ವಿಳಂಬವಾಯಿತು ಎಂದು ತಜ್ಞರು ನಂಬುತ್ತಾರೆ. ಈ ರೋಚಕ ಕಾರ್ಯಾಚರಣೆಯ ವಿವರಗಳನ್ನು ಡಿ. ದೇವದತ್ ಅವರ “ಅಜಿತ್ ದೋವಲ್ – ಆನ್ ಎ ಮಿಷನ್” ಪುಸ್ತಕದಲ್ಲಿ ದಾಖಲಿಸಲಾಗಿದೆ.