ಚೆನ್ನೈ : ಟಿವಿಕೆ ನಾಯಕ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ಕೊನೆಯ ಹಾಗೂ ಬಹುನಿರೀಕ್ಷಿತ ‘ಜನ ನಾಯಕನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರಕ್ಕೆ ಇನ್ನೂ ಸೆನ್ಸಾರ್ ಮಂಡಳಿಯ (CBFC) ಪ್ರಮಾಣಪತ್ರವೇ ಸಿಕ್ಕಿಲ್ಲ. ಈ ನಡುವೆಯೇ ಪೈರಸಿ ವೆಬ್‌ಸೈಟ್‌ಗಳಲ್ಲಿ ಇಡೀ ಸಿನಿಮಾದ ಹೆಚ್‌ಡಿ (HD) ಪ್ರಿಂಟ್ ಲಭ್ಯವಾಗಿರುವುದು ಚಿತ್ರತಂಡ ಹಾಗೂ ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.

ಪೂರ್ಣ ಪ್ರಮಾಣದ ಸಿನಿಮಾ ಸೋರಿಕೆಯಾಗುವ ಮುನ್ನವೇ, ಎಕ್ಸ್ (ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟೈಟಲ್ ಕಾರ್ಡ್, ನಾಯಕನ ಎಂಟ್ರಿ ದೃಶ್ಯ ಹಾಗೂ ಕ್ಲೈಮ್ಯಾಕ್ಸ್‌ನ ಕೆಲವು ತುಣುಕುಗಳು ಹರಿದಾಡಿದ್ದವು. ಎಚ್ಚೆತ್ತ ಚಿತ್ರತಂಡ ತಕ್ಷಣವೇ ಆ ವಿಡಿಯೋಗಳನ್ನು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ನೋಡನೋಡುತ್ತಿದ್ದಂತೆಯೇ ಇಡೀ ಸಿನಿಮಾದ ಹೆಚ್‌ಡಿ ವರ್ಷನ್ ಪೈರಸಿ ತಾಣಗಳಲ್ಲಿ ಪ್ರತ್ಯಕ್ಷವಾಗಿದೆ. ಶುಕ್ರವಾರ ಬೆಳಿಗ್ಗೆ ವಿಕಿಪೀಡಿಯಾ ಪುಟದಲ್ಲೂ ಚಿತ್ರದ ಸೋರಿಕೆಯಾದ ಯುಆರ್‌ಎಲ್ (URL) ಕಾಣಿಸಿಕೊಂಡಿತ್ತು. ಆದರೆ, ಇದು ಕೇವಲ ವದಂತಿ ಅಥವಾ ದುರುದ್ದೇಶಪೂರಿತ ವೈರಸ್ ಲಿಂಕ್ ಆಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಘಟನೆಯ ಕುರಿತು ದೂರು ದಾಖಲಿಸುವಂತೆ ವಿಜಯ್ ಅಭಿಮಾನಿಗಳು ನಿರ್ಮಾಣ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಪೈರಸಿ ವೆಬ್‌ಸೈಟ್‌ನ ಅಚ್ಚರಿಯ ನಿರ್ಧಾರ
ಇದೇ ವೇಳೆ, ತಮಿಳು ಸಿನಿಮಾಗಳನ್ನು ಅಕ್ರಮವಾಗಿ ರಿಲೀಸ್ ಮಾಡುವುದರಲ್ಲಿ ಕುಖ್ಯಾತಿ ಪಡೆದಿರುವ ‘ತಮಿಳುಎಂವಿ’ (TamilMV) ಎಂಬ ಪೈರಸಿ ವೆಬ್‌ಸೈಟ್ ಅಚ್ಚರಿಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. “ನಟ ವಿಜಯ್ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಅರಿವು ನಮಗಿದೆ. ಹೀಗಾಗಿ ನಮ್ಮ ನೈತಿಕತೆಯ ಆಧಾರದ ಮೇಲೆ, ಚಿತ್ರವು ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ನಾವು ಈ ಸಿನಿಮಾವನ್ನು ನಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಸೆನ್ಸಾರ್ ಮಂಡಳಿಯ ಕಗ್ಗಂಟಿನಲ್ಲಿ ‘ಜನ ನಾಯಕನ್’
ಸಂಪೂರ್ಣವಾಗಿ ರಾಜಕೀಯಕ್ಕೆ ಧುಮುಕುವ ಮುನ್ನ ವಿಜಯ್ ನಟಿಸಿದ ಕೊನೇ ಸಿನಿಮಾ ಇದಾಗಿದ್ದು, ಜನವರಿ 9ರಂದು ತೆರೆಕಾಣಬೇಕಿತ್ತು. ಆದರೆ, ಚಿತ್ರದ ಕೆಲವು ದೃಶ್ಯಗಳು ಜನರ ಭಾವನೆಗಳಿಗೆ ಧಕ್ಕೆ ತರುವಂತಿವೆ ಎಂದು ಸೆನ್ಸಾರ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಬಿಡುಗಡೆಯನ್ನು ಮುಂದೂಡಲಾಗಿತ್ತು. ಸೆನ್ಸಾರ್ ಪ್ರಕ್ರಿಯೆ ಚುರುಕುಗೊಳಿಸುವಂತೆ ಕೋರಿ ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಒಂದು ತಿಂಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ, ಅರ್ಜಿಯನ್ನು ಹಿಂಪಡೆದು ಪರಿಷ್ಕರಣಾ ಸಮಿತಿಗೆ ಚಿತ್ರವನ್ನು ಸಲ್ಲಿಸಲು ತಂಡ ಒಪ್ಪಿಕೊಂಡಿತು. ಪ್ರಸ್ತುತ ಸಿನಿಮಾ ಪರಿಷ್ಕರಣಾ ಸಮಿತಿಯ ಮುಂದಿದ್ದು, ಅದರ ಭವಿಷ್ಯ ಡೋಲಾಯಮಾನವಾಗಿದೆ.
ಇನ್ನೊಂದೆಡೆ, ಅದೇ ಸಮಯದಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ಬಂದಿರುವ ಕಾರಣ ಎಲೆಕ್ಷನ್ ಮುಗಿಯುವವರೆಗೂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ. ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮೂಲಕ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದೇ ಈ ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವ ‘ಜನ ನಾಯಕನ್’, ರಾಜಕೀಯ ಎಳೆಗಳನ್ನು ಹೊಂದಿರುವ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾವಾಗಿದೆ. ದಳಪತಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇದೀಗ ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ವಿಡಿಯೋಗಳಿಗೆ ಕಡಿವಾಣ ಹಾಕಲು ಚಿತ್ರತಂಡ ಸತತ ಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ : ಚಂದ್ರದ್ರೋಣ ಪರ್ವತದ ಪ್ರಪಾತದಲ್ಲಿ ಶ್ರೀನಂದಾ ಶವವಾಗಿ ಪತ್ತೆ!



















