ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಮೊದಲ ಪಂದ್ಯವನ್ನು ಭಾರತ ತಂಡ ಭರ್ಜರಿಯಾಗಿ ಗೆದ್ದು ಬೀಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿತು. ಈಗ ಟೆಸ್ಟ್ ಬೌಲರ್ ಗಳ ಶ್ರೇಯಾಂಕ ಪ್ರಕಟವಾಗಿದ್ದು, ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ್ದಾರೆ.
ಐಸಿಸಿ ಇಂದು ಪ್ರಕಟಿಸಿದ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ಅಗ್ರ 10 ರೊಳಗೆ ಭಾರತದ ಮೂವರು ಬೌಲರ್ ಗಳು ಸ್ಥಾನ ಪಡೆದಿದ್ದಾರೆ. ಆರ್. ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಬೌಲರ್ ಗಳ ರ್ಯಾಂಕಿಂಗ್ ಅಷ್ಟೇ ಅಲ್ಲದೇ, ಆಲ್ ರೌಂಡರ್ ಗಳ ಪಟ್ಟಿಯಲ್ಲೂ ಕಮಾಲ್ ಮಾಡಿದ್ದಾರೆ.
ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಆರ್. ಅಶ್ವಿನ್ ನಂಬರ್ 1 ಸ್ಥಾನದಲ್ಲಿದ್ದರೆ, 854 ಅಂಕಗಳನ್ನು ಹೊಂದಿರುವ ಜಸ್ಪ್ರೀತ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಶ್ರೇಯಾಂಕದ ಮೊದಲೆರಡು ಸ್ಥಾನಗಳಲ್ಲಿ ಭಾರತೀಯರೇ ಸ್ಥಾನ ಪಡೆದಿದ್ದು ವಿಶೇಷವಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದು, 6ನೇ ಸ್ಥಾನದಲ್ಲಿದ್ದಾರೆ.
ಜೋಶ್ ಹ್ಯಾಜಲ್‌ವುಡ್ 3ನೇ ಸ್ಥಾನದಲ್ಲಿದ್ದರೆ, ಪ್ಯಾಟ್ ಕಮಿನ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಗಿಸೊ ರಬಾಡ ಐದನೇ ಸ್ಥಾನದಲ್ಲಿದ್ದರೆ ಮತ್ತೊಬ್ಬ ಆಸೀಸ್ ಬೌಲರ್ ನಾಥನ್ ಲಿಯಾನ್ 7ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಪ್ರಭಾತ್ ಜಯಸೂರ್ಯ, ನ್ಯೂಜಿಲೆಂಡ್ನ ಕೈಲ್ ಜೇಮಿಸನ್, ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಕ್ರಮವಾಗಿ 8ರಿಂದ 10ನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್ ಶ್ರೇಯಾಂಕದಲ್ಲಿಯೂ ಭಾರತೀಯರು ಕಮಾಲ್ ಮಾಡಿದ್ದು, ರವೀಂದ್ರ ಜಡೇಜಾ 475 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.