ಮುಂಬೈ: ಎಲೆಕ್ಟ್ರಿಕ್ ವಾಹನ (EV) ತಯಾರಿಕೆಯಲ್ಲಿ ಜಗತ್ತಿನಾದ್ಯಂತ ಹೆಸರು ಮಾಡಿರುವ ಟೆಸ್ಲಾ ಕಂಪನಿಯು, ಭಾರತದಲ್ಲಿ ತನ್ನ ಮೊದಲ ಕಾರನ್ನು ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು, ಭಾರತದ ಮೊದಲ ಅಧಿಕೃತ ಟೆಸ್ಲಾ ಮಾಡೆಲ್ Y ಕಾರನ್ನು ಶುಕ್ರವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ‘ಟೆಸ್ಲಾ ಎಕ್ಸ್‌ಪೀರಿಯನ್ಸ್ ಸೆಂಟರ್’ನಿಂದ ಸ್ವೀಕರಿಸಿದರು.
ಈ ಕಾರು ಖರೀದಿಯು ಕೇವಲ ವೈಯಕ್ತಿಕವಲ್ಲ, ಬದಲಿಗೆ ಮಹಾರಾಷ್ಟ್ರದ ‘ಹಸಿರು ಚಲನಶೀಲತೆ’ಯ ಆಶಯಗಳ ಸಂಕೇತವಾಗಿದೆ ಎಂದು ಸಚಿವ ಪ್ರತಾಪ್ ಸರ್ನಾಯಕ್ ಹೇಳಿದ್ದಾರೆ. “ನಾನು ಈ ಟೆಸ್ಲಾ ಕಾರನ್ನು ನಾಗರಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮೂಡಿಸಲು ಖರೀದಿಸಿದ್ದೇನೆ. ಸುಸ್ಥಿರ ಸಾರಿಗೆಯ ಮಹತ್ವವನ್ನು ತಿಳಿಸಲು, ಈ ಕಾರನ್ನು ನನ್ನ ಮೊಮ್ಮಗನಿಗೆ ಉಡುಗೊರೆಯಾಗಿ ನೀಡಲಿದ್ದೇನೆ,” ಎಂದು ಅವರು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರವು ಮುಂದಿನ ದಶಕದಲ್ಲಿ ಪ್ರಮುಖ ಇವಿ ಪರಿವರ್ತನೆಯ ಗುರಿಯನ್ನು ಹೊಂದಿದ್ದು, ಈಗಾಗಲೇ ಅಟಲ್ ಸೇತು ಮತ್ತು ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ವಿನಾಯಿತಿಯಂತಹ ಹಲವು ಪ್ರೋತ್ಸಾಹಕಗಳನ್ನು ಘೋಷಿಸಿದೆ ಎಂದು ಅವರು ನೆನಪಿಸಿದರು.

ಟೆಸ್ಲಾ ಮಾಡೆಲ್ Y: ಬೆಲೆ ಮತ್ತು ವೈಶಿಷ್ಟ್ಯಗಳು
ಭಾರತದಲ್ಲಿ ಮಾಡೆಲ್ Y ಎರಡು ಮಾದರಿಗಳಲ್ಲಿ ಲಭ್ಯವಿದೆ
- ರಿಯರ್-ವೀಲ್ ಡ್ರೈವ್ (RWD): 60kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 500 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಬೆಲೆ 59.89 ಲಕ್ಷ ರೂಪಾಯಿ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ.
- ಲಾಂಗ್ ರೇಂಜ್ RWD: ದೊಡ್ಡ ಬ್ಯಾಟರಿ ಹೊಂದಿದ್ದು, 622 ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ. ಇದರ ಬೆಲೆ 67.89 ಲಕ್ಷ ರೂಪಾಯಿ (ಎಕ್ಸ್-ಶೋರೂಂ) ಆಗಿದೆ.
ಟೆಸ್ಲಾದ ‘ಸೂಪರ್‌ಚಾರ್ಜರ್’ ನೆಟ್‌ವರ್ಕ್ ಮೂಲಕ, ಕೇವಲ 15 ನಿಮಿಷಗಳಲ್ಲಿ 250 ಕಿ.ಮೀ.ಗೂ ಹೆಚ್ಚು ರೇಂಜ್ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಪ್ರಸ್ತುತ, ಮುಂಬೈ ಮತ್ತು ದೆಹಲಿಯ ‘ಟೆಸ್ಲಾ ಎಕ್ಸ್‌ಪೀರಿಯನ್ಸ್ ಸೆಂಟರ್’ಗಳಲ್ಲಿ ಈ ಕಾರುಗಳು ಲಭ್ಯವಿವೆ.