ತಿರುವನಂತಪುರಂ: ಮಳೆರಾಯನ ಅಟ್ಟಹಾಸದಿಂದಾಗಿ ಕೇರಳದಲ್ಲಿ ಭೀಕರ ಜಲಸ್ಫೋಟವೊಂದು ಸಂಭವಿಸಿದ್ದು, 19 ಜನ ಸಾವನ್ನಪ್ಪಿ, ನೂರಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕೇರಳದ (Kerala) ವಯನಾಡ್ (Wayanad) ಜಿಲ್ಲೆಯ ಮೆಪ್ಪಾಡಿಯಲ್ಲಿ(Meppadi) ಗುಡ್ಡ ಕುಸಿದಿದೆ. ಈ ದುರಂತದಲ್ಲಿ 19 ಜನ ಸಾವನ್ನಪ್ಪಿದ್ದಾರೆ. ಇಂದು ಬೆಳಗಿನ ಜಾವ 2 ಗಂಟೆಯ ವೇಳೆ ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಹರಿದು ಪಕ್ಕದಲ್ಲಿದ್ದ ಮನೆಗಳ ಮೇಲೆ ಹರಿದು ಹೋಗಿದೆ. ಹೀಗಾಗಿ ಸಾವು-ನೋವು ಸಂಭವಿಸಿವೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಭಾರೀ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಗೂ ಕೂಡ ಮಳೆ ಅಡ್ಡಿ ಪಡಿಸಿದೆ. ಮುಂದಿನ 3 ಗಂಟೆಗಳಲ್ಲಿ ಕೇರಳ, ಲಕ್ಷದ್ವೀಪಗಳಲ್ಲಿ ಪ್ರತ್ಯೇಕವಾದ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಸಾವು-ನೋವುಗಳ ಸಂಖ್ಯೆ ಕಡಿಮೆ ಇರಲಿ ಎಂದು ಭಾರತೀಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
