ಜಲಾವರ್: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಭೀಕರ ದುರಂತದಲ್ಲಿ, ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬಿದ್ದು ಕನಿಷ್ಠ 6 ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೋಹರ್ ಥಾನಾ ಪ್ರದೇಶದ ಪಿಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಬೆಳಗ್ಗೆ ಸುಮಾರು 8:30 ಗಂಟೆಗೆ ಈ ದುರಂತ ಸಂಭವಿಸಿದೆ. ಶಾಲೆಯಲ್ಲಿ ಪಾಠಗಳು ನಡೆಯುತ್ತಿದ್ದಾಗ ಏಕಾಏಕಿ ಏಕಮಹಡಿ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಹಳೆಯ ಕಟ್ಟಡವು ದುರ್ಬಲಗೊಂಡಿತ್ತು. ಕಟ್ಟಡವು ಈಗಾಗಲೇ ಶಿಥಿಲಾವಸ್ಥೆಯಲ್ಲಿದ್ದು, ಈ ಬಗ್ಗೆ ಈ ಹಿಂದೆಯೇ ಹಲವು ಬಾರಿ ದೂರುಗಳನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಟ್ಟಡ ಕುಸಿದ ಶಬ್ದದೊಂದಿಗೆ ಮಕ್ಕಳ ಚೀರಾಟ ಮುಗಿಲುಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಧೂಳು ಆವರಿಸಿದ್ದವು.
ದುರಂತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿ, ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊರತೆಗೆಯಲು ಪ್ರಯತ್ನಿಸಿದರು. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳನ್ನು ತೆರವುಗೊಳಿಸಲು ನಾಲ್ಕು ಜೆಸಿಬಿ ಯಂತ್ರಗಳನ್ನು ಬಳಸಲಾಯಿತು.
ಗಾಯಾಳುಗಳನ್ನು ತಕ್ಷಣವೇ ಮನೋಹರ್ ಥಾನಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಲಾವರ್‌ನಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಆರು ಮಕ್ಕಳು ಮೃತಪಟ್ಟಿರುವುದನ್ನು ರಾಜಸ್ಥಾನದ ಶಿಕ್ಷಣ ಕಾರ್ಯದರ್ಶಿ ಕೃಷ್ಣ ಕುನಾಲ್ ಅವರು ಖಚಿತಪಡಿಸಿದ್ದಾರೆ. ಸುದ್ದಿ ತಿಳಿದು ಮಕ್ಕಳ ಪೋಷಕರು ಮತ್ತು ಸಂಬಂಧಿಕರು ಶಾಲೆಗೆ ಧಾವಿಸಿದ್ದು, ಅಲ್ಲಿನ ವಾತಾವರಣವು ಶೋಕಸಾಗರವಾಗಿತ್ತು.
ತನಿಖೆಗೆ ಆದೇಶ
ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಈ ಘಟನೆ ಅತ್ಯಂತ ದುರಂತಮಯ ಮತ್ತು ದುಃಖದಾಯಕ. ಈ ನೋವಿನ ಸಮಯದಲ್ಲಿ ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದಾರೆ,” ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.
ರಾಜಸ್ಥಾನ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು, “ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲು ಮತ್ತು ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದು, ಕಟ್ಟಡ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುವುದು,” ಎಂದು ತಿಳಿಸಿದ್ದಾರೆ.
ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ?
ಈ ದುರಂತವು ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲಾ ಕಟ್ಟಡಗಳ ನಿರ್ವಹಣೆಯ ಕೊರತೆಯನ್ನು ಎತ್ತಿ ತೋರಿಸಿದೆ. ಹಳೆಯ ಕಟ್ಟಡಗಳ ದುರಸ್ತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ನೀಡಿದ ದೂರುಗಳನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ.