ಚಿಕ್ಕಬಳ್ಳಾಪುರ: ಭೀಕರ ಅಪಘಾತವೊಂದು ನಡೆದ ಪರಿಣಾಮ ಅಪ್ಪ, ಅಮ್ಮ ಹಾಗೂ ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.
ಟಿಟಿ ವಾಹನ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ನಡೆದ ಪರಿಣಾಮ Road Accident) ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಹತ್ತಿರ ನಡೆದಿದೆ.
ಕಾರಿನಲ್ಲಿದ್ದ ಮಗ ಶ್ರೀಕಾಂತ್ ಈತನ ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಟಿಟಿವಾಹನದಲ್ಲಿದ್ದ 12 ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟಿಟಿ ವಾಹನ ಆಂಧಪ್ರದೇಶದ ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ತೆರಳುತ್ತಿತ್ತು. ಅಪಘಾತಕ್ಕೀಡಾದ ಕಾರು ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ.
ಎರಡೂ ವಾಹನಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿವೆ. ಕಾರಿನಲ್ಲಿದ್ದವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದರು. ಬುಧವಾರ ಸಂಬಂಧಿಕರ ಮದುವೆಗೆ ಎಂದು ಆಂಧ್ರದ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆಗೆ ಬಲಿಯಾಗಿದ್ದಾರೆ. ಟಿಟಿ ವಾಹನದಲ್ಲಿದ್ದವರು ಬೆಂಗಳೂರಿನವರಾಗಿದ್ದು, ಬಾಯಿಕೊಂಡ ಗಂಗಮ್ಮ ದೇವಾಲಯಕ್ಕೆ ಹೋಗಿ ಮರಳ ಬರುತ್ತಿದ್ದರು ಎನ್ನಲಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.