2023ರಲ್ಲಿ ಕರ್ನಾಟಕದ ಮತದಾರರು ತಮ್ಮ ತೀರ್ಪು ಬರೆದಾಗಿತ್ತು. ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆ ಅಭೂತ ಪೂರ್ವ ಜನ ಮನ್ನಣೆ ಸಿಕ್ಕಿತ್ತು. ಬರೋಬ್ಬರಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಕರುನಾಡಿನ ಆಡಳಿತ ಚುಕ್ಕಾಣಿ ಹಿಡಿದಿತ್ತು. ಅಸಲಿಗೆ ಈ ಫಲಿತಾಂಶವನ್ನ ಖುದ್ದು ಕಾಂಗ್ರೆಸ್ಸಿಗರೇ ಅಂದಾಜಿಸಿರಲಿಲ್ಲ. ಆ ಮಟ್ಟಿನ ಅಮೋಘ ತೀರ್ಪು ಬರೆದಿದ್ರು ಕನ್ನಡಿಗರು. ಆದರೆ, ಈ ಜನಾದೇಶಕ್ಕೀಗ ಬರೋಬ್ಬರಿ ಎರಡು ವರ್ಷಗಳೇ ಗತಿಸಿ ಹೋಗಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲೇ ಒಂದು ಅವ್ಯಕ್ತ ಭೀತಿ ಆವರಿಸಿಕೊಂಡಿದೆ. ಯೆಸ್ ಅದು ಬೇರ್ಯಾವುದೂ ಅಲ್ಲ ಅದೇ ಮೋದಿ-ಅಮಿತ್ ಶಾ ಅನ್ನೋ ಗುಮ್ಮ.
ಮಹಾರಾಷ್ಟ್ರ ಮಾದರಿ ರಾಜಕೀಯಕ್ಕೆ ಫಿಕ್ಸ್ ಆಯ್ತಾ ಮುಹೂರ್ತ?
ಕರ್ನಾಟಕದ ಮಗ್ಗುಲಲ್ಲೇ ಇರುವ ಮಹಾರಾಷ್ಟ್ರದಲ್ಲಿ ಅವತ್ತು ರಾಜಕೀಯ ಕ್ಷಿಪ್ರ ಕ್ರಾಂತಿಯೇ ನಡೆದು ಹೋಗಿತ್ತು. ಯಾರೊಬ್ಬರೂ ಊಹಿಸದಂತಾ ರಾಜಕಾರಣಕ್ಕೆ ಮರಾಠಿ ಮಣ್ಣು ಜೀವಂತ ಸಾಕ್ಷಿಯಾಗಿತ್ತು. ಆಡಳಿತಾರೂಢ ಮಹಾವಿಕಾಸ್ ಅಘಾಡಿಯನ್ನೇ ತುಂಡರಿಸಿ ಬಿಜೆಪಿ ಪಾಲುದಾರಿಕೆಯಲ್ಲಿ ಮಹಾಯತಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಬಾಳಾ ಠಾಕ್ರೆ ಬಲಗೈ ಬಂಟ ಏಕನಾಥ ಶಿಂಧೆ ಅವತ್ತು ಶಿವಸೇನೆಯನ್ನೇ ಹೈಜಾಕ್ ಮಾಡಿ ಉದ್ಧವ್ ಠಾಕ್ರೆಯನ್ನ ಅನಾಥರನ್ನಾಗಿಸಿದ್ರು.
ಸಾಲದ್ದಕ್ಕೆ ಕೋರ್ಟ್ ಹೋರಾಟದಲ್ಲೂ ಗೆದ್ದು ತಮ್ಮದೇ ಶಿಂಧೆ ಶಿವಸೇನೆ ಕಟ್ಟಿ ಸಿಎಂ ಆಗಿದ್ದು ಇತಿಹಾಸ. ಅಷ್ಟೇ ಅಲ್ಲಾ ಸ್ವಂತ ಚಿಕ್ಕಪ್ಪನ ಬೆನ್ನಿಗೇ ಇರಿದು ಹೊರ ಬಂದ ಅಜಿತ್ ಪವಾರ್ ಕೂಡಾ ಎನ್ ಸಿಪಿಗೆ ತಿಲಾಂಜಲಿ ಹಾಡಿದವರೇ. ಅಷ್ಟಕ್ಕೂ ಈ ಬೆಳವಣಿಗೆಗೂ ಕರ್ನಾಟಕಕ್ಕೂ ಏನ್ ಸಂಬಂಧ ಅನ್ನೋದು ನಿಮ್ಮ ಪ್ರಶ್ನೆ. ಹೌದು..ಕರ್ನಾಟಕದಲ್ಲೂ ಇಂಥದ್ದೇ ರಾಜಕೀಯ ವಿದ್ಯಮಾನ ಘಟಿಸಿದ್ರೆ ಅಚ್ಚರಿಯಿಲ್ಲ ಅನ್ನೋದು ಖುದ್ದು ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ.
ಕರ್ನಾಟಕದ ಶಿಂಧೆ, ಪವಾರ್ ಯಾರಾಗ್ತಾರೆ?
ಹಾಗೆ ನೋಡಿದರೆ ಪಕ್ಷೇತರರನ್ನೂ ಸೇರಿ 140 ಶಾಸಕರ ಸಂಖ್ಯಾ ಬಲ ಸದ್ಯ ಕಾಂಗ್ರೆಸ್ ಗಿದೆ. ಆದರೆ ಒಳಗೊಳಗೇ ಕುದಿಯುತ್ತಿರುವ ಆಂತರಿಕ ಬೇಗುದಿಯ ಜ್ವಾಲಾಮುಖಿ ಅದ್ಯಾವಾಗ ಸ್ಫೋಟಿಸುತ್ತೋ ಅನ್ನೋದು ಯಾರೊಬ್ಬರಿಗೂ ತಿಳಿದಿಲ್ಲ. ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಶೀತಲ ಸಮರವೇ ಪಕ್ಷವನ್ನು ಆಹುತಿ ಪಡೆಯುತ್ತಾ ಅನ್ನೋ ಗುಮಾನಿ ಖರ್ಗೆಯವರಲ್ಲೀಗ ಆವರಿಸಿದೆ. ಹೀಗಾಗಿಯೇ ರಾಜ್ಯದಲ್ಲೂ ಶಿಂಧೆ, ಪವಾರ್ ಮಾದರಿಯಲ್ಲಿ ಯಾರೊಬ್ಬರಾದ್ರು ಬಂಡಾಯವೆಂದ್ರೆ ಕಾಂಗ್ರೆಸ್ ಗೆ ಇರೋ ಏಕೈಕ ದೊಡ್ಡ ರಾಜ್ಯದ ಚುಕ್ಕಾಣಿಯೂ ಕೈತಪ್ಪಲಿದೆ.
ಕಾಂಗ್ರೆಸ್ ಗೆ ಈ ನೀಲಿಗಣ್ಣಿನ ನಾಯಕರದ್ದೇ ತಲೆನೋವು
ಈಗಾಗಲೇ 2 ವರ್ಷ ಪೂರೈಸಿರುವ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಎನ್ನುವ ಕೆಂಡ ನಿಗಿನಿಗಿ ಅಂತಿದೆ. ಡಿ ಕೆ ಶಿವಕುಮಾರ್ ಕುರ್ಚಿಗೇರಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸಿದ್ದು ಎದುರು ಹಾಕಿಕೊಂಡು ಈ ಕಾರ್ಯ ಅಸಾಧ್ಯ. ಈ ಸತ್ಯ ಪಕ್ಷದ ಹೈಕಮಾಂಡ್ ಗೂ ಸ್ಪಷ್ಟವಾಗಿ ಗೊತ್ತಿದೆ. ಆದ್ರೆ ಅಧಿಕಾರದಾಸೆಯಲ್ಲಿ ನಾನೇ ಒಕ್ಕಲಿಗರ ಸರ್ವೋಚ್ಛ ನಾಯಕ ಅಂತಿರೋ ಡಿಕೆ ಬಂಡಾಯವೆದ್ರೆ ಸಿದ್ದು ಕುರ್ಚಿ ಅಲುಗಾಡೋದು ನಿಶ್ಚಿತ. ಒಂದೊಮ್ಮೆ ಹೈಕಮಾಂಡ್ ಸಿದ್ದರಾಮಯ್ಯಗೆ ಕುರ್ಚಿ ಬಿಡು ಅಂದ್ರೆ ಆಗ ವಾಲ್ಮೀಕಿ ಸಮುದಾಯದ ಕಟ್ಟಾಳು ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದ ನಾಯಕತ್ವ ವಹಿಸಿಕೊಂಡು ಬಂಡಾಯ ಬಾವುಟ ಹಾರಿಸೋ ಸಾಧ್ಯತೆಗಳಿವೆ.
ಇದೇ ಚಿಂತೆ ಈಗ ಖರ್ಗೆಯವರನ್ನು ಇನ್ನಿಲ್ಲದಂತೆ ಕಾಡ್ತಿದೆ. ಸಾಲದ್ದಕ್ಕೆ ಈ ನೀಲಿಗಣ್ಣಿನ ಕಾಂಗ್ರೆಸ್ ನಾಯಕರನ್ನ ಮನದಲ್ಲಿಟ್ಟುಕೊಂಡೋ ಏನೋ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಅನ್ನೋ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಮೋದಿ-ಶಾ ಕೈಯಲ್ಲಿರೋ ಇಡಿ, ಐಟಿ ಅಸ್ತ್ರ ಅದಿನ್ಯಾವ ನಾಯಕರನ್ನ ಪಕ್ಷ ನಿಷ್ಠೆ ಬದಲಿಸುವಂತೆ ಮಾಡುತ್ತೋ ಅನ್ನೋದು ಕೂಡಾ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಸಿದ್ದು-ಡಿಕೆಗೆ ಒಗ್ಗಟ್ಟಾಗಿರಿ ಅನ್ನೋ ಕಿವಿ ಮಾತು ಹೇಳಿದ್ದಾರೆ. ಒಟ್ನಲ್ಲಿ ರಾಜ್ಯ ರಾಜಕೀಯದಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಅನ್ನೋದು ಮಾತ್ರ ಬಹಿರಂಗ ಸತ್ಯ.